ಹಾಸನ: ಕಳೆದ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹೊಂದಾಣಿಕೆಯೇ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 150 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೋಮುವಾದಿ ಬಿಜೆಪಿ ಪಕ್ಷಯೊಂದಿಗೆ ಕೈ ಜೋಡಿಸಿದೆ. ಇದರಿಂದಾಗಿಯೇ ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್ ಸೋಲನುಭವಿಸಬೇಕಾಯಿತು ಎಂದು ಕಿಡಿಕಾರಿದ್ದಾರೆ.
Advertisement
Advertisement
ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದು ಪಕ್ಷದ ಮುಖಂಡರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಮೀರಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 4.30 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಮಧ್ಯರಾತ್ರಿವರೆಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಚುನಾವಣೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ ಹಾಸನದಲ್ಲಿ ಕಾನೂನು ಮೀರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಮೀಸಲಾತಿಗೆ ಸಂಬಂಧಿಸಿದಂತೆ ಎರಡನೇ ಶನಿವಾರವೂ ಅಧಿಕಾರಿಗಳು ಕಾರ್ಯನಿರ್ವಹಿಸಿ ಇದಕ್ಕೆ ಸಂಬಂಧಿಸಿದ ಕಡತ ವಿಲೇವಾರಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮೀಸಲಾತಿ ಪಟ್ಟಿ ರೋಸ್ಟರ್ ಪದ್ಧತಿಯಲ್ಲಿ ಹಂಚಿಕೆಯಾಗುತ್ತದೆ. ಆದರೆ 42ನೇ ಪಟ್ಟಿಯಲ್ಲಿರುವ ಅರಸೀಕೆರೆ 52ನೇ ಪಟ್ಟಿಯಲ್ಲಿರುವ ಹಾಸನಕ್ಕೆ ಎಸ್‍ಟಿ ಮೀಸಲಾತಿಯನ್ನು ನೀಡಲಾಗಿದೆ. ಇದು ಕಾನೂನು ಬಾಹಿರ ನಿರ್ಣಯವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ರೇವಣ್ಣ ತಿಳಿಸಿದರು.
ರಾಜ್ಯದಲ್ಲಿ ಉಪಚುನಾವಣೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರ ಚುನಾವಣೆಗಳು ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಎಲ್ಲ ಬೆಳವಣಿಗೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾನೂನು ಸಚಿವರು ಗಮನಕ್ಕೆ ಬಾರದೆ ಹೇಗೆ ನಡೆಯುತ್ತಿದೆ ಗೊತ್ತಾಗುತ್ತಿಲ್ಲ ಎಂದರು.