ಮಂಡ್ಯ: ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸ್ಥಾನ ಗೆಲ್ಲುತ್ತಿದ್ದ ಬಿಜೆಪಿ ಗ್ರಾಮ ಪಂಚಾಯತಿಯಲ್ಲಿ 750-800 ಸ್ಥಾನ ಗೆದ್ದಿದೆ. ಇದನ್ನ ನೋಡಿದಾಗ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಗೊತ್ತಾಗುತ್ತೆ. ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದರು.
ಕೆಳ ಹಂತದಿಂದ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿದೆ. ನಾನು ಈ ಬಗ್ಗೆ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರನ್ನು ದೂರುವುದಿಲ್ಲ. ನಮ್ಮ ಪಕ್ಷದ ಬಲವರ್ಧನೆಗೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಗೆ ಶಾಸಕ ಎಂ.ಶ್ರೀನಿವಾಸ್ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾವು ಯಾರನ್ನೂ ಸೆಳೆಯುವ ಪ್ರಯತ್ನ ಮಾಡಿಲ್ಲ. ಒಂದಿಬ್ಬರು ಎಂಎಲ್‍ಎ ಬಿಟ್ಟರೆ ಉಳಿದವರು ನಮ್ಮ ಜೊತೆಗಿದ್ದಾರೆ. ಕೆಲವು ಸಿಕ್ರೇಟ್‍ಗಳನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಬಿಜೆಪಿ ಮುನ್ನಡೆಸಲು ಜೊತೆಯಾಗಿ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಅದನ್ನು ನಾನು ಈಗ ಬಹಿರಂಗ ಪಡಿಸುವುದಿಲ್ಲ. ಈಗ ಹೇಳಿದರೆ ನೀವು ಅದರ ದಾರಿ ತಪ್ಪಿಸುತ್ತೀರಿ. ಹಾಗಾಗಿ ಎಲ್ಲವೂ ಒಳ್ಳೆಯದಾದ ನಂತರ ನಿಮ್ಮ ಬಳಿ ಹೇಳುತ್ತೇನೆ ಎಂದು ತಿಳಿಸುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಸುಳಿವು ನೀಡಿದರು.