ಬೆಂಗಳೂರು: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲಿ ಸಂಜೆಯ ವೇಳೆ ದಿಢೀರ್ ಬೆಳಕು ಮೂಡಿದ ವಿಚಾರ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದರೆ ನೋಡಿದವರು ನಮ್ಮ ಗ್ರಾಮದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬೆಳಕಿನ ಕುರಿತು ಚರ್ಚೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿಯೂ ಈ ರೀತಿಯಾಗಿ ಬೆಳಕು ಮೂಡುವ ಸಾಧ್ಯತೆಯಿದೆ ಎನ್ನುವ ಮಾತು ಈಗ ಕೇಳಿ ಬಂದಿದೆ.
ನಡೆದಿದ್ದು ಏನು?
ಕಳೆದ ವಾರದ ಪಾಂಡವಪುರ ಭಾಗದಲ್ಲಿ ಭಾರೀ ಸದ್ದು ಕೇಳಿತ್ತು. ಇದಾದ ಮೂರು ದಿನದಲ್ಲಿ ಹೆರಗನಹಳ್ಳಿಯಲ್ಲಿ ಸಂಜೆ 7:15ಕ್ಕೆ ದಿಢೀರ್ ಬೆಳಕು ಕಾಣಿಸಿದೆ. ಸುಮಾರು 5 ನಿಮಿಷಗಳ ಕಾಲ ಈ ಬೆಳಕು ಇತ್ತು. ಬೆಳಗಿನ ಜಾವ ಬೆಳಕು ಹೇಗೆ ಇರುತ್ತದೋ ಅದೇ ರೀತಿಯಾಗಿ ಸಂಜೆಯೂ ಕಾಣಿಸಿತ್ತು. ಈ ರೀತಿ ಆಗಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಅಚ್ಚರಿಗೆ ಕಾರಣವಾದ ಈ ಘಟನೆ ನಿಜವಾಗಿಯೇ ನಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಕಮಲಾ ಅವರನ್ನು ಸಂಪರ್ಕಿಸಿದ್ದು ಅವರು ಮಂಡ್ಯದ ಬೆಳಕನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.
ವೈಜ್ಞಾನಿಕ ವಿಶ್ಲೇಷಣೆ ಏನು?
ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕಿನೊಂದಿಗೆ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿದ್ಯಮಾನಗಳು. ಈ ಎರಡೂ ಘಟನೆಗಳು ಕ್ಷಿತಿಜದಂಚಿನಲ್ಲಿ ನಡೆಯುತ್ತಿರುತ್ತದೆ. ಇವೆರಡರೊಂದಿಗೆ ಬೆಸೆದಿರುವ ವಿದ್ಯಮಾನಗಳು ಮುಂಜಾನೆ ಮತ್ತು ಮುಸ್ಸಂಜೆ.
ಸೂರ್ಯ ಕ್ಷಿತಿಜದಂಚಿನಲ್ಲಿ ಮರೆಯಾದ ನಂತರವೂ ಸುಮಾರು 18 ಡಿಗ್ರಿಗಳಷ್ಟು ಕೆಳಗಿಳಿಯುವ ತನಕ ಸೂರ್ಯನಿಂದ ಬೆಳಕು ಸ್ಪರ್ಷಕವಾಗಿ (Tangential) ಬರುತ್ತಿರುತ್ತದೆ. ಇದು ಸುಮಾರು 45 – 50 ನಿಮಿಷ ಬರುತ್ತಿರುತ್ತದೆ. ಈ ರೀತಿ ಬಂದ ಬೆಳಕು ನಿರ್ದಿಷ್ಟ ದಿಕ್ಕಿನಲ್ಲಿ ಮೋಡಗಳ ಮೇಲೆ ಬಿದ್ದಾಗ ಅಲ್ಲಿನ ವಾತಾವರಣವನ್ನನುಸರಿಸಿ ಪ್ರತಿಫಲಿತವಾಗುತ್ತದೆ. ಈ ಪ್ರತಿಫಲಿತ ಬೆಳಕು ಮಂಡ್ಯದ ಕೆಲ ಹಳ್ಳಿಗಳ ಮೇಲಾಗಿದೆ.
ಭೂಮಿಯ ಮೇಲಿನ ವಿವಿಧ ಪ್ರದೇಶಗಳು ಅಲ್ಲಿನ ಸೂರ್ಯಾಸ್ತದ ಸಮಯ ಇತ್ಯಾದಿ ಅಂಶಗಳ ಆಧಾರದ ಮೇಲೆ ಇದನ್ನು ವಿವರಿಸಲಾಗುತ್ತದೆ. ಧ್ರುವ ಪ್ರದೇಶಗಳೆಡೆಗೆ ಸಾಗಿದಂತೆ ಈ ವಿದ್ಯಮಾನ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಉಲ್ಕೆಯ ಸಿದ್ಧಾಂತದ ಆಧಾರದ ಮೇಲೂ ವಿವರಣೆಗಳು ನಡೆಯುತ್ತಿವೆ. ಈ ಕಾರಣದಿಂದ ಮಂಡ್ಯದ ಗ್ರಾಮದಲ್ಲಿ ಬೆಳಕು ಕಾಣಿಸಿರಬಹುದು. ಇನ್ನಿತರ ವಿವರಣೆಗಳಿಗೆ ಮುಂದೆ ಕಾಯೋಣ.