– ಕಟ್ಟಡ ತೆರವಿನಲ್ಲಿ ನಗರಸಭೆ ತಾರತಮ್ಯ
ಮಂಡ್ಯ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವ ರೀತಿಯಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ನಗರ ಸಭೆ ಬಡವರ ಮೇಲೆ ಪ್ರತಾಪ ತೋರಿಸಿ, ಶ್ರೀಮಂತರಿಗೆ ಸಲಾಮ್ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಮಂಡ್ಯ ನಗರಸಭೆಗೆ ಆಸ್ತಿ ಸಂರಕ್ಷಿಸಿಕೊಳ್ಳುವುದೆ ದೊಡ್ಡ ಸವಾಲಾಗಿತ್ತು. ವಾರದ ಹಿಂದೆ ನಗರ ಸಭೆಯ ನೂತನ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ಮಂಜು ಆರಂಭದಲ್ಲೇ ಒತ್ತುವರಿ ತೆರವಿಗೆ ಮುಂದಾಗಿದ್ದರು. ನಗರದ ಕನ್ಸರ್‍ವೆನ್ಸಿ ಗಲ್ಲಿಗಳಲ್ಲಿ ತಲೆಎತ್ತಿದ್ದ ಕೆಲ ಅಕ್ರಮ ಕಟ್ಟಡಗಳನ್ನ ಹೊಡೆದುರುಳಿಸಲಾಯ್ತು.
Advertisement
ತೆರವು ಕಾರ್ಯಾಚರಣೆ ಒಂದೇ ದಿನಕ್ಕೆ ಸೀಮಿತವಾಗಿದೆ. ಯಾವುದೇ ನೋಟಿಸ್ ನೀಡದೆ ಕೇವಲ ಬಡವರ ಕಟ್ಟಡಗಳನ್ನು ತೆರವು ಗೊಳಿಸಿದೆ. ಶ್ರೀಮಂತರ ಅಕ್ರಮ ಕಟ್ಟಡಗಳನ್ನು ಮುಟ್ಟುವ ಸಾಹಸಮಾಡಿಲ್ಲ. ಇದರಿಂದ ಬಡ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಈ ಮೂಲಕ ನಗರಸಭೆ ಅಧ್ಯಕ್ಷರು ಅಧಿಕಾರಿಗಳು ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
Advertisement
ಮಂಡ್ಯ ನಗರದ ಪ್ರಮುಖ 5 ರಸ್ತೆಗಳ ನಡುವೆ 4 ಕನ್ಸರ್‍ವೆನ್ಸಿ ಗಲ್ಲಿಗಳಿವೆ. ಅಕ್ಕಪಕ್ಕದ ಮನೆಗಳ ಒಳಚರಂಡಿ, ಕುಡಿಯುವ ನೀರಿನ ಪೈಪ್‍ಲೈನ್, ಕೆಇಬಿ ಲೈನನ್ನು ಎಳೆಯಲು ಈ ಕನ್ಸರ್‍ವೆನ್ಸಿ ಗಲ್ಲಿಗಳನ್ನು ದಶಕಗಳ ಹಿಂದೆಯೇ ಬಿಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲೇ ಒಳಚರಂಡಿ, ಕುಡಿಯುವ ನೀರಿನ ಪೈಪ್ ಲೈನ್‍ಗಳಿಗಾಗಿ ಕನ್ಸರ್‍ವೆನ್ಸಿ ಜಾಗ ಬಳಕೆಯಾಗದೆ ಇದೆ. ಈ ಕಾರಣವನ್ನೇ ಬಂಡವಾಳ ಮಾಡಿಕೊಂಡ ಅಕ್ಕಪಕ್ಕದ ಮನೆಯವರು 18 ರಿಂದ 20 ಅಡಿ ಅಗಲದ ಈ ಗಲ್ಲಿಗಳನ್ನು ಬಹುತೇಕ ಒತ್ತುವರಿ ಮಾಡಿದ್ದಾರೆ. ತಾತ್ಕಾಲಿಕ ಕಟ್ಟಡ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದವರು ಇನ್ನೂ ಕೆಲವರು ಮನೆಗಳನ್ನ ನಿರ್ಮಿಸಿ ವಾಸವಾಗಿದ್ದರು.
ಕನ್ಸರ್‍ವೆನ್ಸಿ ಗಲ್ಲಿ ಒತ್ತುವರಿ ಬಗ್ಗೆ ನಗರಸಭೆಗೆ ಸಾರ್ವಜನಿಕ ದೂರ ನೀಡಿದ್ದರು. ಹೊಸ ಅಧ್ಯಕ್ಷರು ನಗರಸಭೆ ಗಲ್ಲಿ ಜಾಗಗಳ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಕೆಲ ಕಟ್ಟಡಗಳನ್ನು ಜೆಸಿಬಿ ಮುಖಾಂತರ ನೆಲಸಮ ಮಾಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಒಂದೇ ದಿನಕ್ಕೆ ನಿಂತು ಹೋಯ್ತು. ಆ ದಿನ ಕಟ್ಟಡ ಕಳೆದುಕೊಂಡು ಬೀದಿಗೆ ಬಿದ್ದಿದ್ದು ಮಾತ್ರ ಬಡ ವ್ಯಾಪಾರಿಗಳು. ಕಾನೂನಿನ ಹೆಸರಿನಲ್ಲಿ ಏಕಾಏಕಿ ಬಡವರ ಹೋಟೆಲ್, ಟೀ ಅಂಗಡಿಗಳನ್ನ ಹೊಡೆದುರುಳಿಸಲಾಗಿದೆ.
ಕನ್ಸರ್‍ವೆನ್ಸಿ ಗಲ್ಲಿಗಳಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದ ಶ್ರೀಮಂತರ ಸಹವಾಸಕ್ಕೆ ಕೈ ಹಾಕದೇ ಜೆಸಿಬಿ ಶಬ್ದ ನಿಲ್ಲಿಸಿದ್ದಾರೆ. ಈ ತಾರತಮ್ಯದ ಬಗೆಗಿನ ಪ್ರಶ್ನೆಗೆ ಉತ್ತರಿಸುವ ಅಧಿಕಾರಿಗಳು ಕಾರ್ಯಾಚರಣೆ ಈಗ ಶುರುವಾಗಿದೆ. ಕೆಲದಿನಗಳ ಬಳಿಕ ಮುಂದುವರೆಸುತ್ತೇವೆ ಎಂದು ನುಣಚಿಕೊಳ್ಳುತ್ತಿದ್ದಾರೆ.