ಮಂಡ್ಯ: ಸಕ್ಕರೆ ನಾಡು ಮಂಡ್ಯ ಅಂದರೆ ಇಡೀ ರಾಜ್ಯದಲ್ಲಿ ಬೆಲ್ಲಕ್ಕೆ ಫುಲ್ ಫೇಮಸ್ ಆಗಿರುವ ಜಿಲ್ಲೆ. ಇಲ್ಲಿನ ಆಲೆಮನೆಗಳಲ್ಲಿ ಮಾಡುವ ರಾಸಾಯನಿಕ ರಹಿತ ಬೆಲ್ಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಬೇಡಿಕೆ ಇದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಬೆಲ್ಲದ ಗುಣಮಟ್ಟ ಕೆಡುವುದರ ಜೊತೆಗೆ ಈ ಜಿಲ್ಲೆಯ ಬೆಲ್ಲದ ವರ್ಚಸ್ಸು ಕೂಡ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಕೆಲಸಗಾರರು ಹಾಗೂ ಮಾಲೀಕರು. ಇವರು ತಯಾರು ಮಾಡುತ್ತಿರುವ ಬೆಲ್ಲದ ವಿಧಾನದಿಂದ ಮಂಡ್ಯ ಬೆಲ್ಲ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿದೆ.
ಹೌದು. ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಮಾಲೀಕರು ಹಾಗೂ ಕೆಲಸಗಾರರು ಪಾಂಡವಪುರದಲ್ಲಿ ಅತೀ ಹೆಚ್ಚು ಆಲೆಮನೆಗಳಲ್ಲಿ ರಾಸಾಯನಿಕ ಬಳಸಿ ಬೆಲ್ಲವನ್ನು ತಯಾರು ಮಾಡುತ್ತಿದ್ದಾರೆ. ಬಣ್ಣ ಬರುವ ಉದ್ದೇಶದಿಂದ ಜೀವಕ್ಕೆ ಹಾನಿಕಾರವಾಗಿರುವ ರಾಸಾಯನಿಕವನ್ನು ಬೆಲ್ಲ ತಯಾರಿಕೆ ವೇಳೆ ಬಳಸಲಾಗುತ್ತಿದೆ. ಇದಲ್ಲದೆ ಇಳುವರಿ ಬರಲು ಹಾಗೂ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಕೆಳಮಟ್ಟದ ಸಕ್ಕರೆಯನ್ನು ಬೆಲ್ಲಕ್ಕೆ ಸುರಿಯಲಾಗುತ್ತಿದೆ. ಈ ಸಕ್ಕರೆ ತಿನ್ನಲು ಯೋಗ್ಯವಿರುವುದಿಲ್ಲ. ಇದರಿಂದ ಅಧಿಕ ಲಾಭಗಳಿಸಬಹುದು ಎಂದು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾರೆ.
ಈ ರೀತಿ ಕೆಮಿಕಲ್ ಬೆಲ್ಲವನ್ನು ಸೇವನೆ ಮಾಡಿದರೆ ಬೋನ್ ಕ್ಯಾನ್ಸರ್ ಅಂತಹ ರೋಗಗಳು ಬರುವ ಸಾಧ್ಯತೆಗಳಿವೆ. ಹೀಗಾಗಿ ಮಂಡ್ಯ ಬೆಲ್ಲವನ್ನು ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ಮೂಲ ಆಲೆಮನೆ ಮಾಲೀಕರಿಗೆ ತೊಂದರೆಯುಂಟಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಾತ್ರ ಈ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಆಹಾರ ಇಲಾಖೆಯ ನಿರ್ದೇಶಕರಿಗೆ ವರದಿ ನೀಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.