ಕಾರವಾರ: ಲಾಕ್‍ಡೌನ್ ಇರುವುದರಿಂದ ಬಹಳಷ್ಟು ಜನರು ಮನೆಯಲ್ಲೇ ಇದ್ದು ಸಮ್ಮನೆ ಕಾಲ ಹರಣ ಮಾಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜುಗುಣಿಯ ಕೂಲಿ ಕಾರ್ಮಿಕ ಏಕಾಂಗಿಯಾಗಿ ಬಾವಿ ತೋಡಿ ಊರಿನ ಕುಡಿಯುವ ನೀರಿನ ದಾಹ ನೀಗಿಸಿದ್ದಾರೆ.
ಗುದ್ದಲಿ ಹಿಡಿದು ಕಲ್ಲಿನ ನೆಲ ಅಗೆಯುತ್ತಿರುವ ವ್ಯಕ್ತಿ ಹೆಸರು ಮಹಾದೇವ ಮಂಕಾಳುನಾಯ್ಕ್. ಅಂಕೋಲದ ಮಂಜಗುಣಿ ಊರಿನ ನಿವಾಸಿ. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ. ಗ್ರಾಮಪಂಚಾಯ್ತಿಯಿಂದ ಇರುವ ಒಂದು ಬಾವಿಯಲ್ಲಿ ಅರವತ್ತಕ್ಕೂ ಹೆಚ್ಚು ಮನೆಯಿರುವ ಜನರು ನೀರು ತರಬೇಕು. ಜೂನ್ ತಿಂಗಳು ಬರುವುದರೊಳಗೆ ಇದ್ದ ಒಂದು ಬಾವಿ ಅಂತರ್ಜಲ ಇಳಿದು ಕುಡಿಯುವುದಕ್ಕೆ ಗ್ರಾಮಪಂಚಾಯ್ತಿಯಿಂದ ವಾರಕ್ಕೆ ಒಂದು ಬಾರಿ ಬರುವ ನೀರೇ ಗತಿ.
Advertisement
Advertisement
ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಬಾವಿ ಇದ್ದರೂ ಹೆಚ್ಚು ನೀರು ಇರದ ಕಾರಣ ಹಾಗೂ ಪಕ್ಕದಲ್ಲೇ ಸಮುದ್ರ ಇರುವುದರಿಂದ ಬಿರು ಬೇಸಿಗೆಯಲ್ಲಿ ತಳ ಹಿಡಿದ ನೀರು ಉಪ್ಪು ನೀರಾಗಿ ಪರಿವರ್ತಿತವಾಗುತ್ತದೆ. ಹೀಗಾಗಿ ಊರ ಮಂದಿಯಲ್ಲಾ ಖಾಲಿ ಕೊಡ ಹಿಡಿದು ಟ್ಯಾಂಕರ್ ಬರುವ ದಾರಿಯನ್ನು ಕಾಯುವುದೇ ದಿನದ ಕೆಲಸವಾಗುತಿತ್ತು. ಮಹಾದೇವ ಮಂಕಾಳುನಾಯ್ಕ್ ರವರು ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇದೇ ಜೀವನದ ಆಧಾರ ಕೂಡ. ಹೀಗಿರುವಾಗ ಲಕ್ಷಾಂತರ ರೂಪಾಯಿ ಸುರಿದು ಬಾವಿ ತೋಡಿಸಲು ಸಾಧ್ಯವೇ? ಹೀಗೆ ಅಂದುಕೊಂಡಿದ್ದ ಇವರಿಗೆ ಕಳೆದ ವರ್ಷದ ಲಾಕ್‍ಡೌನ್ ಕೂಲಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತೆ ಮಾಡಿತು.
Advertisement
Advertisement
ಹೀಗೆ ಮನೆಯಲ್ಲಿದ್ದ ಇವರು ಪತ್ನಿ ಹಾಗೂ ಊರಿನ ಮಹಿಳೆಯರು ನೀರು ತರಲು ಪಡುವ ಕಷ್ಟವನ್ನು ನೋಡಿ ತಾವೇ ಒಂದು ಬಾವಿ ತೋಡಿದರೆ ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಮನೆಯ ಹಿತ್ತಲನ್ನು ಆಯ್ಕೆ ಮಾಡಿಕೊಂಡರು. ಆದರೆ ಬಾವಿ ತೋಡುವುದು ಸುಲಭದ ಕೆಲಸವಾಗಿರಲಿಲ್ಲ. ಹಿತ್ತಲ ಜಾಗ ಕಲ್ಲಿನ ಅರೆಯಿಂದ ಆವೃತವಾಗಿತ್ತು. ಆದರೂ ಛಲ ಬಿಡದ ಇವರು ಗುದ್ದಲಿ, ಪಿಕಾಸಿ ಹಿಡಿದು ಕಲ್ಲಿನ ಅರೆಯನ್ನು ಅಗೆಯತೊಡಗಿದರು. ಸರಿ ಸುಮಾರು ಎಂಟು ತಿಂಗಳ ಪ್ರಯತ್ನ 32 ಅಡಿಗಳ ಆಳದ ಬಾವಿ ನಿರ್ಮಾಣವಾಯಿತು. ಆದರೆ ಅಲ್ಪ ಜಲಬಂದರೂ ಬಳಸಲು ಹೆಚ್ಚು ಅನುಕೂಲವಾಗಿರಲಿಲ್ಲ. ಇನ್ನು ಅಷ್ಟರಲ್ಲಾಗಲೇ ಲಾಕ್‍ಡೌನ್ ಸಹ ಸಡಿಲಿಕೆ ಆದ್ದರಿಂದ ಹೊಟ್ಟೆ ಪಾಡಿಗಾಗಿ ಕೂಲಿಗೆ ಹೊರಟರು.
ಕೊರೊನಾ ಎರಡನೇ ಅಲೆ ಬಂದಿದ್ದರಿಂದ ಮತ್ತೆ ಲಾಕ್‍ಡೌನ್ ಆಗಿದ್ದರಿಂದ ಮತ್ತೆ ಬಾವಿ ತೋಡಲು ಪ್ರಾರಂಭಿಸಿದರು. ಈ ಬಾರಿ ಅವರ ಅದೃಷ್ಟ ಕುಲಾಯಿಸಿತ್ತು. ಕಡು ಕಲ್ಲನ್ನ ಕಷ್ಟಪಟ್ಟು ಕೊರೆದ ಇವರಿಗೆ ನಾಲ್ಕು ಅಡಿ ಹೋಗುತಿದ್ದಂತೆ ಬರಪೋರ ಅಂತರಗಂಗೆ ಚಿಮ್ಮಿ ಬರತೊಡಗಿದಳು. ಇವರ ಭಗೀರಥ ಪ್ರಯತ್ನಕ್ಕೆ ನಾಲ್ಕು ಅಡಿ ಕಲ್ಲನ್ನು ಕೊರೆದ ಫಲವಾಗಿ ಹತ್ತು ಅಡಿ ಜಲ ಮೇಲೆದ್ದು ಬಂದಿತ್ತು. ಇವರ ಶ್ರಮಕ್ಕೆ ಕುಟುಂಬ ಸಹ ಖುಷಿ ಪಟ್ಟು ತಮ್ಮ ನೀರಿನ ಸಮಸ್ಯೆ ನೀಗಿತು ಎಂದು ನಿಟ್ಟುಸಿರು ಬಿಡುವಂತಾಯಿತು. ಜೊತೆಗೆ ಊರಿನ ಜನರ ಖಾಲಿ ಕೊಡ ಸಹ ಬಾವಿಯ ಮುಂದೆ ಸರತಿ ಸಾಲು ನಿಲ್ಲುತ್ತಿದ್ದು ಜನರಿಗೆ ಮಹಾದೇವ ಮಂಕಾಳುನಾಯ್ಕ ಜಲಾಮೃತವನ್ನು ತುಂಬಿ ಕೊಡುತಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಸಮಯ ಸದುಪಯೋಗ-25 ಅಡಿ ಬಾವಿ ತೋಡಿದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ
ಇನ್ನು ಊರಿನ ಜನರು ಕೂಡ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು ತನ್ನ ಸ್ವಂತಕ್ಕಲ್ಲದೇ ಊರಿನವರಿಗೂ ನೀರು ಕೊಡುತ್ತಿರುವ ಈ ಆಧುನಿಕ ಭಗೀರಥನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೀವಜಲ ಬೇಕಾದ್ರೆ ಜೀವವನ್ನೇ ಒತ್ತೆ ಇಡಬೇಕು- ಎದೆಮಟ್ಟದ ಹಳ್ಳ ದಾಟಲು ಮಹಿಳೆಯರ ಪರದಾಟ