ಬೆಂಗಳೂರು: ಪತ್ನಿಯ ಪ್ರಿಯತಮನನ್ನು ಆಕೆಯ ಪತಿಯೇ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಅಂದ್ರಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಶಿವು ಎಂದು ಗುರುತಿಸಲಾಗಿದೆ. ವಿನುತಾ ಮತ್ತು ಭರತ್ ಜೋಡಿ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿತ್ತು. ಈ ನಡುವೆ ಪತ್ನಿ ವಿನುತಾ ಜೊತೆ ಶಿವು ಸಂಬಂಧ ಇಟ್ಟುಕೊಂಡಿದ್ದ.
ಗಂಡ ಕೆಲಸಕ್ಕೆಂದು ಮನೆ ಬಿಟ್ಟು ಹೋದ ಬಳಿಕ ಶಿವು ವಿನುತಾಳನ್ನ ಭೇಟಿಯಾಗಲು ಬರುತ್ತಿದ್ದನು. ಪತಿ ಇಲ್ಲದಿದ್ದಾಗ ಪ್ರಿಯತಮನ ಜೊತೆ ಚಕ್ಕಂದ ಆಡುತ್ತಿದ್ದ ಪತ್ನಿಯ ಕಳ್ಳ ಕೆಲಸ ಭರತ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ ಕೆಲಸಕ್ಕೆಂದು ಹೋದ ಭರತ್, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಲುವಾಗಿ ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.
ಇತ್ತ ಕೆಲಸಕ್ಕೆಂದು ಹೋಗಿದ್ದ ಪತಿ ಏನೂ ಹೇಳದೆ ಮನೆಗೆ ಏಕಾಏಕಿ ಬರುತ್ತಿದ್ದಂತೆಯೇ ಗಾಬರಿಗೊಂಡ ವಿನುತಾ, ತನ್ನ ಪ್ರಿಯಕರನನ್ನು ಮಂಚದ ಕೆಳಗೆ ಅವಿತುಕೊಳ್ಳುವಂತೆ ಸೂಚನೆ ನೀಡಿದ್ದಾಳೆ. ಆದರೆ ಇದನ್ನು ಮನಗಂಡ ಪತಿ ಭರತ್, ಮಂಚದ ಕೆಳಗೆ ಅವಿತಿದ್ದ ಶಿವುನನ್ನು ಹೊರಗೆ ಎಳೆದು ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿತದಿಂದ ಗಂಭೀರ ಗಾಯಗೊಂಡ ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿದಂತೆ ಭರತ್ ನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.