ಹಾಸನ: ಮಲೆನಾಡು ಭಾಗ ಸಕಲೇಶಪುರದಲ್ಲಿ ಗಜ ಗಲಾಟೆ ಮುಂದುವರಿದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಒಂಟಿಸಲಗ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಡಾನೆ ರಸ್ತೆಯಲ್ಲಿ ನಿಂತಿದ್ದರಿಂದ ಹೆಗ್ಗದ್ದೆ ಬಳಿ ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಆರು ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ನಿಂತಲ್ಲೇ ನಿಲ್ಲಬೇಕಾಯಿತು.
ಫೆ.25 ರಂದು ಇದೇ ಸ್ಥಳದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾಗಿದ್ದ. ಲಾರಿ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ರಾಜಸ್ಥಾನದ ಭರತ್ ಪುರ ಮೂಲದ ಕಂಟೇನರ್ ಚಾಲಕ ವಕೀಲ್(25) ಸಾವನ್ನಪ್ಪಿದ್ದರು.
ರಕ್ಷಿತಾರಣ್ಯದೊಳಗೆ ತೆರಳಿದ್ದ ಎಂದು ಅರಣ್ಯ ಇಲಾಖೆ ಪರಿಹಾರವನ್ನು ನೀಡಿರಲಿಲ್ಲ. ಅರಣ್ಯ ಇಲಾಖೆ ಧೋರಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕಾಡಾನೆ ರಸ್ತೆಯಲ್ಲಿ ನಿಂತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.