-ಮನೆಯಲ್ಲಿ ಮಲಗಿದ್ದ ಅಣ್ಣ-ತಂಗಿ ಏಳಲೇ ಇಲ್ಲ
ಮಂಗಳೂರು: ಗುರುಪುರದ ಬಳಿಯ ಗುಡ್ಡ ಕುಸಿತ ಸಂಭವಿಸಿದ ಬಳಿಕ ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಶವವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಯಿಂದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದೀಗ 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರ ಮೃತ ದೇಹ ಪತ್ತೆಯಾಗಿವೆ.
ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ಮೂರ್ನಾಲ್ಕು ಗಂಟೆಗಳಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿತ್ತು. ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು. ಹೀಗಾಗಿ ಇಷ್ಟೇ ಸಮಯಕ್ಕೆ ಮುಗಿಯುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ.ಬಿ.ರೋಪೆಶ್ ತಿಳಿಸಿದ್ದರು. ಆದರೆ ಇದೀಗ ಇಬ್ಬರ ಮಕ್ಕಳ ಶವವನ್ನು ಹೊರಗಡೆ ತೆಗೆಯಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಗುಡ್ಡದ ಸುತ್ತ ಮುತ್ತ ಇದ್ದ 15 ಮನೆಯಲ್ಲಿದ್ದ ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ನಾಳೆ ತಜ್ಞರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.