ಮಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಹಳೆಯಂಗಡಿಯ ಕಲ್ಲಾಪು ಬಳಿ ನಡೆದಿದೆ.
ವಿನೋದ್ ಸಾಲ್ಯಾನ್ (38), ರಚನಾ (38), ಸಾಧ್ಯ (10) ಮೃತರು. ಮನೆಯಿಂದ ಎರಡು ದಿನಗಳಿಂದ ಹೊರಗೆ ಬಾರದಿದ್ದಾಗ ಸ್ಥಳೀಯರು ಕಿಟಕಿಯಲ್ಲಿ ನೋಡಿದಾಗ ಶವಗಳು ಕಂಡು ಬಂದಿವೆ. ಕೂಡಲೇ ಮುಲ್ಕಿ ಠಾಣೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಮೃತ ವಿನೋದ್ ಸಾಲ್ಯಾನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊರೊನಾ ಲಾಕ್‍ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದ ಕಳೆದು ಒಂದು ವರ್ಷದಿಂದ ಹಳೆಯಂಗಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಹಾರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ವಿಷದ ಬಾಟಲ್ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಮುಲ್ಕಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.