ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ಮುರಾಡಿ ನಿವಾಸಿ ವಸಂತ್ (33) ಬಂಧಿತ ಆರೋಪಿ. ಈತ ನಿನ್ನೆ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ ರಾವ್ ಅವರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ.
ಇತ್ತ ಬೆದರಿಕೆ ಕರೆ ಆಗಮಿಸುತ್ತಿದಂತೆ ವಾಸುದೇವ ರಾವ್ ಅವರು ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಲಾಗಿತ್ತು. ಆ ಬಳಿಕ ಫೋನ್ ಕರೆ ಹುಸಿ ಬೆದರಿಕೆ ಎಂಬುವುದು ಖಚಿತವಾಗಿತ್ತು.
ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ನಂಬರ್ ಆಧರಿಸಿ ಟ್ರ್ಯಾಕ್ ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದರು. ಸದ್ಯ ಬಂಧಿತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತಂತೆ ಬಜಪೆ ಠಾಣಾ ಪೊಲೀಸರಿಂದ ಪ್ರಕರಣ ದಾಖಲಾಗಿದೆ.