ಮಂಗಳೂರು: ಮಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ಒಂದು ಅಂದರ್ ಆಗಿದೆ. ವ್ಯಕ್ತಿಯೊಬ್ಬನನ್ನು ಅಪಹರಿಸಿ ಚಿನ್ನ ದರೋಡೆ ಹಾಗೂ ಸುಪಾರಿ ನೀಡಿದ ಪ್ರಕರಣ ಸಂಬಂಧ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ ಮೊದಲ ವಾರದಲ್ಲಿ ಮುಂಬೈನ ರೆಹಮಾನ್ ಶೇಖ್ ಬೆಂಗಳೂರಿನಲ್ಲಿನ ತನ್ನ ಸಂಬಂಧಿ ಹೈದರಾಲಿಗೆ 440 ಗ್ರಾಂ ಚಿನ್ನ ತಲುಪಿಸುವಂತೆ ಮೂಡಬಿದ್ರಿಯ ವಕಾರ್ ಯೂನುಸ್‍ಗೆ ಚಿನ್ನ ನೀಡಿದ್ದ.
ಈ ಮಾಹಿತಿ ವಕಾರ್ ಯೂನುಸ್‍ನ ಸ್ನೇಹಿತರಾದ ಮಹಝ್, ಉಪ್ಪಳದ ಅದಿಲ್ ಎಂಬವರಿಗೆ ಗೊತ್ತಾಗಿದ್ದು ವಕಾರ್ ಯೂನುಸ್‍ನ್ನು ಮೂಡಬಿದ್ರೆ ಕರೆಸಿಕೊಂಡಿದ್ದಾರೆ. ಆ ಬಳಿಕ ವಕಾರ್ ನನ್ನು ಕಾರಿನಲ್ಲಿ ಅಪಹರಿಸಿ ಕೇರಳದ ಉಪ್ಪಳದಲ್ಲಿ ಆತನ ಬಳಿಯಲಿದ್ದ ಚಿನ್ನ ದರೋಡೆ ಮಾಡಿ ಬಿಟ್ಟು ಕಳುಹಿಸಿದ್ದರು. ಈ ಪ್ರಕರಣ ಸಂಬಂಧ ಕಾಲಿಯಾ ಸುಹೈಲ್ ಗ್ಯಾಂಗ್‍ನ ಇಬ್ಬರು ಸಹಚರರಾದ ಮೂಡಬಿದ್ರಿಯ ಮೊಹಮ್ಮದ್ ಮಹಜ್, ಉಪ್ಪಳದ ಮೊಹಮ್ಮದ್ ಅದಿಲ್‍ನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ಚಿನ್ನ ಬೆಂಗಳೂರಿಗೆ ತಲುಪದೇ ಇದ್ದುದರಿಂದ ಚಿನ್ನ ತಲುಪಿಸಬೇಕಿದ್ದ ವಕಾರ್ ಯೂನುಸ್ ಮೇಲೆ ಚಿನ್ನದ ಮೂಲ ವಾರಿಸುದಾರರು ಸಂಶಯ ವ್ಯಕ್ತಪಡಿಸುತ್ತಾರೆ. ಹೀಗಾಗಿ ಚಿನ್ನ ಪತ್ತೆ ಹಾಗೂ ಕೊಲೆಗೆ ಚಿನ್ನದ ವಾರೀಸುದಾರ ರೆಹಮಾನ್ ಶೇಖ್ ಪಣಂಬೂರಿನ ರೌಡಿಶೀಟರ್ ಪಟ್ಟೋಡಿ ಸಲಾಂಗೆ ಐದು ಲಕ್ಷಕ್ಕೆ ಸುಪಾರಿ ಕೊಟ್ಟಿರುತ್ತಾನೆ. ಪಟ್ಟೋಡಿ ಸಲಾಂ ಚಿನ್ನ ನೀಡುವಂತೆ ವಕಾರ್ ಯೂನುಸ್‍ಗೆ ಕೊಲೆ ಬೆದರಿಕೆ ಹಾಕುತ್ತಾನೆ. ಇದರಿಂದ ಕಂಗೆಟ್ಟ ವಕಾರ್ ಯೂನುಸ್ ಮೂಡಬಿದ್ರಿ ಠಾಣೆಗೆ ದೂರು ನೀಡುತ್ತಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಪಹರಿಸಿ ಚಿನ್ನ ದರೋಡೆ ಮಾಡಿದ ಇಬ್ಬರನ್ನು ವಶಪಡಿಸಿಕೊಳ್ಳುತ್ತಾರೆ. ಬಳಿಕ ಸುಪಾರಿ ನೀಡಿದ ಹಾಗೂ ಸುಪಾರಿ ಪಡೆದ ಆರೋಪ ಸಂಬಂದ 9 ಜನ ಆರೋಪಿಗಳನ್ನು ಬಂಧಿಸುತ್ತಾರೆ.
ಬಂಧಿತ ಪ್ರಮುಖ ಆರೋಪಿಯೋರ್ವ ಮಾಜಿ ಶಾಸಕರೊಬ್ಬರ ಆಪ್ತ
ಬಂಧಿತರಿಂದ 13 ಲಕ್ಷ 86 ಸಾವಿರ 600 ರೂ ಮೌಲ್ಯದ 300 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಪಹರಣ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸುಪಾರಿ ಪ್ರಕರಣದಲ್ಲಿ ಅಂದರ್ ಆಗಿರುವವರಿಂದ ಒಂದು ಸ್ವಿಫ್ಟ್ ಕಾರು, ಒಂದು ಇನ್ನೋವಾ ಕಾರು, 5 ತಲವಾರು, 10 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಅಬ್ದುಲ್ ಸಲಾಂ, ಮೊಹಮ್ಮದ್ ಶಾರೂಕ್ ಮಂಗಳೂರಿನವರಾಗಿದ್ದು, ಸೈಯದ್ ಹೈದರಾಲಿ, ಅಸೀಫ್ ಆಲಿ ಬೆಂಗಳೂರಿನವರಾಗಿದ್ದು, ಅಬ್ದುಲ್ಲಾ ಶೇಖ್, ಶಾಬಾಸ್ ಹುಸೈನ್, ಮುಶಾಹಿದ್ ಅನ್ಸಾರಿ, ಶೇಖ್ ಸಾಜಿದ್ ಹುಸೈನ್, ಮುಸ್ತಾಕ್ ಖುರೇಷಿ ಮುಂಬೈ ನಿವಾಸಿಗಳಾಗಿದ್ದಾರೆ. ಸುಪಾರಿ ಕಿಂಗ್ ಪಿನ್ ರೌಡಿಶೀಟರ್ ಪಟ್ಟೋಡಿ ಸಲಾಂ ಮಂಗಳೂರಿನ ಮಾಜಿ ಶಾಸಕರೊಬ್ಬರ ಬಲಗೈ ಬಂಟನಾಗಿದ್ದು, ಅವರ ಬಿಲ್ಡರ್ಸ್ ವ್ಯವಹಾರ ಎಲ್ಲ ಈತನೇ ನೋಡಿಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ.
ಈ ಹನ್ನೊಂದು ಜನ ಆರೋಪಿಗಳು ಈ ಹಿಂದೆಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದವರಾಗಿದ್ದು, ಗ್ಯಾಂಗ್‍ನಲ್ಲಿ ಇನ್ನಷ್ಟು ಮಂದಿ ಇರುವುದು ಗೊತ್ತಾಗಿದೆ. ಒಟ್ಟಿನಲ್ಲಿ ಮಂಗಳೂರು ಪೊಲೀಸರು ಖತರ್ನಾಕ್ ಗ್ಯಾಂಗ್ ಒಂದನ್ನು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.