ಮಂಗಳೂರು: ಸಮುದ್ರ ಮಧ್ಯೆ ನಡೆದ ಬೋಟ್ ದುರಂತದಲ್ಲಿ ಆರು ಮಂದಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ದಕ್ಕೆಯಿಂದ ನಿನ್ನೆ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ದುರಂತಕ್ಕೀಡಾಗಿದೆ. 25 ಜನರ ತಂಡ ಪರ್ಸೀನ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇನ್ನೇನು ಮೀನುಗಾರಿಕೆ ಮುಗಿಸಿ ವಾಪಾಸು ದಡಕ್ಕೆ ಆಗಮಿಸುತ್ತಿದ್ದರು. ತಡರಾತ್ರಿ ಮೀನು ತುಂಬಿಸಿಕೊಂಡು ವಾಪಸ್ ಬರುವಾಗ ಅಳಿವೆ ಬಾಗಿಲು ಸಮೀಪ ಬೋಟು ತಿರುವು ಪಡೆಯುವ ವೇಳೆ ಪಲ್ಟಿಯಾಗಿದೆ.
ಘಟನೆಯಲ್ಲಿ ಆರು ಜನ ಕಣ್ಮರೆಯಾಗಿದ್ದರೆ, 19 ಜನ ಇನ್ನೊಂದು ಸಣ್ಣ ಡಿಂಕಿ ಬೋಟ್ ಮೂಲಕ ದಡ ಸೇರಿದ್ದಾರೆ. ನಾಪತ್ತೆಯಾದ ಎಲ್ಲರೂ ಮಂಗಳೂರು ಮೂಲದವರೆ ಆಗಿದ್ದಾರೆ. ಬೋಟ್ ಸಂಪೂರ್ಣ ಪಲ್ಟಿಯಾಗಿದ್ದರಿಂದ ಮೀನುಗಾರರಿಗೆ ವೈಯರ್ ಲೆಸ್ ಮೂಲಕ ರಕ್ಷಣೆಗೆ ಸಂದೇಶ ನೀಡುವುದಕ್ಕೆ ಸಾಧ್ಯವಾಗಿಲ್ಲ. ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಳುಗುತಜ್ಞರು, ಕೋಸ್ಟಲ್ ಗಾರ್ಡ್ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಸದ್ಯ ನಾಪತ್ತೆಯಾಗಿರುವ ಆರು ಜನರಲ್ಲಿ ಬೊಕ್ಕಪಟ್ನ ನಿವಾಸಿಗಳಾದ ಪ್ರೀತಂ, ಪಾಡುರಂಗ ಸುವರ್ಣ ಎಂಬವರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ನಾಲ್ಕೂ ಜನ ಝಿಯಾವುಲ್ಲ, ಅನ್ಸಾರ್, ಹಸೈನಾರ್, ಚಿಂತನ್‍ಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಘಟನೆಯಿಂದಾಗಿ ಕಡಲಮಕ್ಕಳು ಆತಂಕಕ್ಕೀಡಾಗಿದ್ದಾರೆ. ಮೃತ ಕುಟಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇವರನ್ನೇ ನಂಬಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬ ಒತ್ತಾಯವು ಕೇಳಿಬಂದಿದೆ.