ಮಂಗಳೂರು: ನಗರದಲ್ಲಿನ ಗೋಡೆ ಬರಹ ವಿಚಾರ ಇಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಮಧ್ಯೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಗಿದೆ.
ಕೆಲದಿನದ ಹಿಂದೆ ಉಗ್ರರ ಪರವಾಗಿ ಹಾಗೂ ಮುಸ್ಲಿಂ ಧರ್ಮದ ಪರವಾಗಿ ಎರಡು ಕಡೆಗಳಲ್ಲಿ ಗೋಡೆ ಬರಹ ಪತ್ತೆಯಾಗಿತ್ತು. ಈ ಘಟನೆ ನಡೆದು ಒಂದು ವಾರವಾದರೂ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಈ ವಿಚಾರ ಇಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‍ನ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಘಟನೆಗೆ ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದರು. ಬಳಿಕ ಇದಕ್ಕೆ ಉತ್ತರ ನೀಡುವ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಕೈ ಕೈಮಿಲಾಯಿಸುವ ಹಂತಕ್ಕೂ ತಲುಪಿತು. ಬಳಿಕ ಪಾಲಿಕೆ ಆಯುಕ್ತರು ಎಲ್ಲಾ ಸದಸ್ಯರನ್ನು ಸಮಾಧಾನ ಪಡಿಸಿ ಸಭೆಯನ್ನು ಮುಂದೂಡಿದರು.