ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಂದು ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ.
ಭಟ್ಕಳ ಮೂಲದ 31 ವರ್ಷದ ಯುವಕ ಹಾಗೂ ಮಂಗಳೂರಿನ ಬೆಂಗ್ರೆ ನಿವಾಸಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 31 ವರ್ಷದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಯುವಕನ ಸಾವಿನ ಬಳಿಕ ಕೊರೊನಾ ಟೆಸ್ಟ್ ಮಾಡಿದ್ದು, ಅದರಲ್ಲಿ ಆತನಿಗೆ ಸೋಂಕು ದೃಢಪಟ್ಟಿದೆ.
ಇತ್ತ ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ 78 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವ್ಯಕ್ತಿಗೂ ಕೊರೊನಾ ಟೆಸ್ಟ್ ಮಾಡಿದ್ದು, ಅದರಲ್ಲಿ ಪಾಸಿಟಿವ್ ಬಂದಿತ್ತು, ಇದೀಗ ಅವರು ಕೂಡ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.