ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಕೊರೊನಾ ಕೇಸ್ ಹತೋಟಿಗೆ ಬಂದರೂ ಈಗ ಕೇರಳದವರಿಂದ ಕೊರೊನಾ ಮತ್ತೆ ಸ್ಫೋಟಗೊಳ್ಳುತ್ತಿದೆ.
ಮಂಗಳೂರಿನಲ್ಲಿ 26 ನರ್ಸಿಂಗ್ ಕಾಲೇಜುಗಳಿದ್ದು, ದೇಶದ ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಕೇರಳ ರಾಜ್ಯದವರೇ ಅಧಿಕವಾಗಿದ್ದಾರೆ. ಅನ್ಯ ರಾಜ್ಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿ ಜಿಲ್ಲೆಗೆ ಪ್ರವೇಶಿಸಬೇಕೆಂಬ ನಿಯಮವನ್ನು ಜಿಲ್ಲಾಡಳಿತ ಹಾಕಿದೆ. ಆದರೆ ನೆರೆಯ ಕೇರಳ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಸುಳ್ಳು ರಿಪೋರ್ಟ್ ಮಾಡಿಸಿ ಕಾಲೇಜಿಗೆ ಪ್ರವೇಶಿಸುತ್ತಿದ್ದಾರೆ.
Advertisement
Advertisement
ಇಲಿ ಜ್ವರದ ಪರೀಕ್ಷೆ ಮಾಡಿಸಿ ಅದನ್ನೇ ಕಾಲೇಜಿಗೆ ಕೊಟ್ಟು ಪ್ರವೇಶಾತಿ ಪಡೆಯುತ್ತಿದ್ದಾರೆ. ಹೀಗೆ ಪ್ರವೇಶ ಪಡೆದ ಕೇರಳದ ವಿದ್ಯಾರ್ಥಿಗಳಲ್ಲಿ ಮೊದಲು 6 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇದೀಗ ಪಾಸಿಟಿವ್ ಸಂಖ್ಯೆ 48 ಮಂದಿಗೆ ಏರಿಕೆಯಾಗಿದೆ. ಉಳ್ಳಾಲದ ಆಲಿಯಾ ನರ್ಸಿಂಗ್ ಕಾಲೇಜಿನ 100 ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆಯನ್ನು ಜಿಲ್ಲಾಡಳಿತ ಮಾಡಿದ್ದು, 100 ರಲ್ಲಿ 48 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಇವರೆಲ್ಲರೂ ಕಾಲೇಜಿನ ಹಾಸ್ಟೆಲ್ ನಲ್ಲೇ ಉಳಿದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದು, ಸದ್ಯ ಕಾಲೇಜು ಮತ್ತು ಹಾಸ್ಟೆಲ್ ನ್ನು ಸೀಲ್ ಡೌನ್ ಮಾಡಲಾಗಿದೆ. ಎರಡೂ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ನಿರ್ಬಂಧ ಹೇರಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಹೇಳಿದ್ದಾರೆ.
Advertisement
Advertisement
ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದ್ದರೂ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಹಣದಾಸೆಗೆ ನಿಯಮ ಮುರಿಯೋದು ಕೂಡ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಬೋಗಸ್ ರಿಪೋರ್ಟ್ ತಂದರೂ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುತ್ತಿದೆ. ಜಿಲ್ಲಾಡಳಿತ ಮತ್ತೆ ನಡೆಸುವ ರ್ಯಾಂಡಮ್ ಟೆಸ್ಟ್ ನಲ್ಲಿ ಕೇರಳದ ವಿದ್ಯಾರ್ಥಿಗಳು ಸಿಕ್ಕಿಬೀಳುತ್ತಿದ್ದು, ಮೊದಲೇ ಕಾಲೇಜು ಆಡಳಿತ ಮಂಡಳಿ ಸರಿಯಾಗಿ ಕೆಲಸ ನಿರ್ವಹಿಸಿದರೆ ಅಪಾಯ ತಪ್ಪಿಸಬಹುದಾಗಿದೆ. ಹೀಗಾಗಿ ನಿಯಮ ಮೀರುವ ಕಾಲೇಜು ಗಳ ವಿರುದ್ಧದ ದ.ಕ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡಿದೆ.
ಕೇರಳದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಅತೀ ಹೆಚ್ಚಾಗುತ್ತಿದ್ದು, ಕೇರಳದಿಂದ ಬರುವವರನ್ನು ನಿಯಂತ್ರಿಸೋದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಅದರಲ್ಲೂ ಕೇರಳ, ಮಂಗಳೂರಿನ ಜೊತೆ ಶೈಕ್ಷಣಿಕ, ಆರೋಗ್ಯ, ವ್ಯವಹಾರಿಕ ಸಂಪರ್ಕವನ್ನು ಪಡೆಯಲೇಬೇಕಾದ ಅನಿವಾರ್ಯತೆಯೂ ಇದೆ. ಇತ್ತ ಸಂಪೂರ್ಣ ಕಡಿವಾಣ ಹಾಕಲೂ ಆಗದೆ, ಕೊರೊನಾ ನಿಯಂತ್ರಣವನ್ನು ಕೂಡ ಮಾಡಬೇಕಾದ ಸಂದಿಗ್ಧತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೆ.