ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಜನ ಮಂಗಗಳ ಕಾಟಕ್ಕೆ ಬೆಚ್ಚಿಬಿದ್ದಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಏಕಾಏಕಿ ದಾಳಿ ನಡೆಸಿದ ಮಂಗಗಳು ಸಿಕ್ಕಸಿಕ್ಕವರ ಮೇಲೆರಗಿ ಕಚ್ಚಿ ಗಾಯಗೊಳಿಸಿವೆ.
ಪಟ್ಟಣದ ರಥ ಬೀದಿಯಲ್ಲಿ ಇಂದು ಒಂದೇ ದಿನ ನಾಲ್ಕು ಜನರ ಮೇಲೆ ದಾಳಿ ಮಾಡಿರುವ ಮಂಗಗಳು, ಮಕ್ಕಳು ಹಾಗೂ ದಾರಿ ಹೋಕರಿಗೆ ಕೈ, ಕಾಲಿಗೆ ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಸುತ್ತಮುತ್ತ ಓಡಾಡಿಕೊಂಡಿರುವ ಮಂಗಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.