ರಾಯಚೂರು: ಕೊರೊನಾದಂತ ಸಂಕಷ್ಟ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದು ಬಿಜೆಪಿಯ ಸಂಸ್ಕಾರವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ಕೋವಿಡ್ ಸಲಕರಣೆ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡಿದೆ ಅಂತ ಆರೋಪಿಸಿದ್ದಾರೆ. ವೆಂಟಿಲೇಟರ್, ಪಿಪಿಇ ಕಿಟ್ ಹಾಗೂ ಮಾಸ್ಕ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. 4,500 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಕುರಿತಾಗಿ ವೈಟ್ ಪೇಪರ್ ರೀಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಹೊರಟಿದ್ದರೂ ಸರ್ಕಾರ ಸುಮ್ಮನಿದ್ದು ಇದರಲ್ಲಿ ಸರ್ಕಾರ ಶಾಮೀಲಾಗಿದೆ ಎಂದು ಆರೋಪ ಮಾಡಿದರು.
Advertisement
Advertisement
ಲಾಕ್‍ಡೌನ್ ಸಂದರ್ಭದಲ್ಲಿ ನಷ್ಟಕ್ಕೆ ಒಳಗಾಗಿರೋ ರೈತರು ಹಾಗೂ ಸಣ್ಣ ವ್ಯಾಪಾಗಳು ಮತ್ತು ಮಡಿವಾಳ, ಸವಿತಾ ಸಮಾಜದವರಿಗೆ ಹಣ ನೀಡುವ ಜೊತೆಗೆ, ಕೋವಿಡ್‍ನಲ್ಲಾಗಿರುವ ಭ್ರಷ್ಟಾಚಾರದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮಾಡಬೇಕೆಂದು ಒತ್ತಾಯಿಸಿದರು. ಡಿಕೆಶಿ ಹಾಗೂ ಕುಮಾರಸ್ವಾಮಿ ಅವರ ಕುರಿತಾಗಿ ಮಾಜಿ ಸಚಿವ ನೂತನ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಜನರ ದಿಕ್ಕು ತಪ್ಪಿಸಲು ಸಿಪಿ ಯೋಗೀಶ್ವರ್ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕುಟುಕಿದರು.