ನವದೆಹಲಿ: ಭೂಕಂಪನದ ಬಗ್ಗೆ ಮುಂಚಿತವಾಗಿ ಎಚ್ಚರಿಸುವ ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರುವುದಾಗಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಹೇಳಿಕೊಂಡಿದೆ. ಆಂಡ್ರಾಯ್ಡ್ ಮೊಬೈಲ್‍ಗಳಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲಿದ್ದು ಮೊಬೈಲ್ ಮೂಲಕ ಭೂಕಂಪನ ಮಾಹಿತಿ ಮುಂಚೆಯೇ ತಿಳಿಯಲಿದೆ ಎಂದು ಗೂಗಲ್ ಸಂಸ್ಥೆ ಹೇಳಿಕೊಂಡಿದೆ.
ಮಂಗಳವಾರ ಈ ವಿಶಿಷ್ಟ ತಂತ್ರಜ್ಞಾನವನ್ನು ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆ ಮಾಡಿದ್ದು, ಆರಂಭಿಕ ಪ್ರಯೋಗಗಳು ಇಲ್ಲಿ ನಡೆಯಲಿದೆ. ಶೇಕ್ ಅಲರ್ಟ್ ತಂತ್ರಜ್ಞಾನ ಇಲ್ಲಿ ಬಳಕೆ ಮಾಡಿದ್ದು ಭೂಮಿಯ ಕಂಪನಗಳನ್ನು ಆಧರಿಸಿ ಮಾಹಿತಿ ನೀಡಲಿದೆ. ಇದರಿಂದ ವ್ಯಕ್ತಿ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಗೂಗಲ್ ಹೇಳಿಕೊಂಡಿದೆ.
ಹೊಸ ವೈಶಿಷ್ಟ್ಯದ ಕುರಿತು ಮಾತನಾಡಿರುವ ಆಂಡ್ರಾಯ್ಡ್ ನ ಪ್ರಧಾನ ಸಾಫ್ಟ್ ವೇರ್ ಎಂಜಿನಿಯರ್ ಮಾರ್ಕ್ ಸ್ಟೊಗೈಟಿಸ್, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‍ಜಿಎಸ್) ಮತ್ತು ಕ್ಯಾಲಿಫೋರ್ನಿಯಾ ಗವರ್ನರ್ ಆಫೀಸ್ ಆಫ್ ಎಮರ್ಜೆನ್ಸಿ ಸರ್ವೀಸಸ್ (ಕ್ಯಾಲ್ ಒಇಎಸ್) ನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ.
ರಾಷ್ಟ್ರದ ಪ್ರಮುಖ ಭೂಕಂಪಶಾಸ್ತ್ರಜ್ಞರು ಅಭಿವೃದ್ಧಿಪಡಿಸಿದ ಶೇಕ್ ಅಲರ್ಟ್ ವ್ಯವಸ್ಥೆಯ ಯುಎಸ್‍ಜಿಎಸ್, ಕ್ಯಾಲ್ ಒಇಎಸ್, ಕ್ಯಾಲಿಫೋರ್ನಿಯಾ ಬಕ್ರ್ಲಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ಥಾಪಿಸಲಾದ 700 ಕ್ಕೂ ಹೆಚ್ಚು ಭೂಕಂಪಮಾಪಕಗಳಿಂದ ಸಂಕೇತಗಳನ್ನು ಬಳಸಿ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕ್ಯಾಲಿಫೋರ್ನಿಯಾದಲ್ಲಿ ಸೀಸ್ಮೋಮೀಟರ್ ಗಳನ್ನು ಸ್ಥಾಪಿಸಲಾಗಿದೆ. ಈ ಹಿನ್ನೆಲೆ ಮೊದಲು ಕ್ಯಾಲಿಫೋರ್ನಿಯಾದಲ್ಲಿ ಆರಂಭಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಆಂಡ್ರಾಯ್ಡ್‍ನ ಫೋನ್ ಆಧಾರಿತ ಭೂಕಂಪ ಪತ್ತೆ ವೈಶಿಷ್ಟ್ಯವು ವಿಶ್ವದ ಇತರ ಭಾಗಗಳಲ್ಲಿ ಲಭ್ಯವಾಗಲಿದೆ ಎಂದು ಗೂಗಲ್ ಹೇಳಿದೆ.



