ಕಾರವಾರ: ಕರಾವಳಿಯಲ್ಲಿ ಕಳೆದ ಎರಡು ವರ್ಷದಿಂದ ಸುರಿದ ಬಾರಿ ಮಳೆ ಸಾಕಷ್ಟು ಅನಾಹುತವನ್ನೇನೋ ತಂದಿತ್ತು. ಈಗ ಇತಿಹಾಸದ ಗತ ವೈಭವ ಸಾರುವ 11ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ಶಿವನ ಶಿಲಾ ದೇವಸ್ಥಾನಗಳು ಭೂಮಿಯಲ್ಲಿ ಹುದುಗಿ ಹೋಗಿದ್ದು, ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮಾರುಗದ್ದೆ ಗ್ರಾಮದಲ್ಲಿ 11ನೇ ಶತಮಾನದ ಕಲ್ಯಾಣಿ ಚಾಲುಕ್ಯರು ತಮ್ಮ ಆಡಳಿತಾವಧಿಯಲ್ಲಿ ನಾಲ್ಕು ಶಿವಾಲಯವನ್ನು ನಿರ್ಮಿಸಿದ್ದು, ಇದರಲ್ಲಿ ಒಂದು ಬಾದಾಮಿಯಲ್ಲಿರುವ ದೇವಸ್ಥಾನದಂತೆ ಶಿಲಾಮಯವಾಗಿದೆ. ಇಲ್ಲಿನ ಕೆತ್ತನೆಗಳು ಮನೋಜ್ಞವಾಗಿದ್ದು, ಪ್ರತಿ ಕಲ್ಲುಗಳಲ್ಲಿ ಮೂಡಿರುವ ಶಿವ, ವೀರಭದ್ರ, ದುರ್ಗೆ ಸೇರಿದಂತೆ ಹಲವು ಶಿಲಾ ಕಲಾಕೃತಿಗಳಿವೆ.
Advertisement
Advertisement
ಕಂಬಗಳು ಶಿಲಾಮಯವಾಗಿದ್ದು, ಕಲ್ಯಾಣಿ ಚಾಲಿಕ್ಯರ ಶೈಲಿಯ ಈ ದೇವಸ್ಥಾನ ಎಂತಹವರನ್ನೂ ಮನಸೂರೆಗೊಳ್ಳುತ್ತದೆ. ಆದರೆ ಕಳೆದ ಎರಡು ವರ್ಷದಿಂದ ಸುರಿದ ಭಾರೀ ಮಳೆ ಶಿಲಾಮಯ ದೇವಸ್ಥಾನದ ಜೊತೆ ಪುರಾತನ ನಾಲ್ಕು ದೇವಸ್ಥಾನದವನ್ನು ಸಂಪೂರ್ಣ ನುಂಗಿದೆ. ಹಿಂದೆ ಸುರಿದ ಅಬ್ಬರದ ಮಳೆ ನೀರಿಗೆ ಇಡೀ ದೇವಸ್ಥಾನದ ಅರ್ಧ ಭಾಗ ಮಣ್ಣಿನಿಂದ ಮುಚ್ಚಿಹೋಗಿದೆ.
Advertisement
ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ಅವರ ಪ್ರಕಾರ ಈ ದೇವಸ್ಥಾನ 11ನೇ ಶತಮಾನದ್ದಾಗಿದ್ದು, ಇವುಗಳ ಉತ್ಕಲನ ನಡೆಸಿದರೆ ಹಲವು ವಿಶೇಷ ಮಾಹಿತಿಗಳು ಲಭಿಸುತ್ತವೆ. ಈ ದೇವಸ್ಥಾನದ ಸುತ್ತ ಅಗ್ರಹಾರ ಹಾಗೂ ಹಿಂದೆ ಜನವಸತಿ ಇದ್ದ ಕುರುಹುಗಳಿದ್ದು, ಕಲ್ಯಾಣಿ ಚಾಲುಕ್ಯರ ಕಾಲದ ಗತವೈಭವವನ್ನು ಸಾರುತ್ತವೆ. ಆದರೆ ಇಷ್ಟೊಂದು ಮಹತ್ವ ಇರುವ ಈ ದೇವಸ್ಥಾನ ಈಗ ಹಾಳು ಬಿದ್ದಿದೆ.
ಪ್ರವಾಹ ಇಲ್ಲಿನ ಹಲವು ವಿಗ್ರಹಗಳನ್ನು ಕೊಚ್ಚಿಕೊಂಡು ತನ್ನೊಂದಿಗೆ ತೆಗೆದುಕೊಂಡು ಹೋದ್ರೆ, ಹಲವು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗುತಿತ್ತು. ಆದರೆ ಕಳೆದ ಎರಡು ವರ್ಷದಿಂದ ಸುರಿದ ಅಬ್ಬರದ ಮಳೆಯಿಂದಾಗಿ ಮಾರು ದೂರದಲ್ಲಿ ಇರುವ ಹೊಳೆಯ ನೀರು ಹಾಗೂ ಗುಡ್ಡದಿಂದ ಕೊಚ್ಚಿ ಬಂದ ಮಣ್ಣಿನ ಮಡ್ಡಿಯಿಂದಾಗಿ ಎಲ್ಲವೂ ಮುಚ್ಚಿಹೋಗಿದೆ. ಜೊತೆಗೆ ಹಲವು ವಿಗ್ರಹಗಳು ನೀರಿನಲ್ಲಿ ತೇಲಿಹೋಗಿದ್ದು ಶಿಲೆಗಳು ಹಲವು ಭಾಗದಲ್ಲಿ ಕುಸಿದು ಬಿದ್ದಿವೆ.
ಗ್ರಾಮಾದ ಜನ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಮನವಿ ಮಾಡಿ ಇವುಗಳನ್ನು ರಕ್ಷಿಸಿ, ಈ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಸಾಮಾಜಿಕವಾಗಿ ಹಿಂದುಳಿದ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂದು ಕಳೆದ ಒಂದು ವರ್ಷದಿಂದ ಪತ್ರ ಹೋರಾಟ ಮಾಡುತಿದ್ದಾರೆ.
ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆ ಜಾಣ ಕಿವುಡುತನ ತೋರಿಸಿದೆ. ಇದರಿಂದಾಗಿ ಪುರಾಣ ಪ್ರಸಿದ್ಧ ಗೋಕರ್ಣದಂತೆ ಪ್ರಸಿದ್ದಿಯಾಗಬೇಕಿದ್ದ ಈ ಶಿವನ ದೇವಾಲಯ ಭೂಮಿ ಪಾಲಾಗಿ ಹೋಗುತ್ತಿದೆ. ಸದ್ಯ ಸಂಪೂರ್ಣ ಜೀರ್ಣಾವಸ್ಥೆ ತಲುಪಿರುವ ಈ ದೇವಸ್ಥಾನ ಮೊದಲಿನಂತಾಗಬೇಕು ಎನ್ನುವುದು ಗ್ರಾಮದ ಜನರ ಆಶಯವಾಗಿದೆ.
ಇತಿಹಾಸ ಸ್ಮಾರಕವನ್ನು ರಕ್ಷಿಸುವ ಹೊಣೆ ಪುರಾತತ್ವ ಇಲಾಖೆಯದ್ದು. ಆದರೆ ಗ್ರಾಮಸ್ತರೇ ಈ ದೇವಸ್ಥಾನವನ್ನು ರಕ್ಷಿಸಿ ಜೀರ್ಣೋದ್ಧಾರ ಮಾಡುವಂತೆ ಮನವಿ ಮಾಡಿದರೂ, ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ.