– ಲಾಕ್‍ಡೌನ್‍ನಿಂದ ಕೂಲಿ ಕಳೆದುಕೊಂಡ ಕುಟುಂಬ
ಮಡಿಕೇರಿ: ಕೊರೊನಾ ಮಹಾಮಾರಿ ಪ್ರತಿಯೊಬ್ಬರ ಜೀವನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭೂಕುಸಿತದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕುಟುಂಬ ಇದೀಗ ಲಾಕ್‍ಡೌನ್ ನಿಂದ ಕೂಲಿಯನ್ನೂ ಕಳೆದುಕೊಂಡು ಒಂದೊತ್ತಿನ ಗಂಜಿಗೂ ಪರಿದಾಡುತ್ತಿದೆ. ಹಲವು ಖಾಯಿಲೆಗಳಿಂದ ನರಳುವ ತಂದೆ, ತಾಯಿಯನ್ನು ಸಾಕುವುದು ಪಿಯುಸಿ ಓದುತ್ತಿದ್ದ ಮಗನ ಹೆಗಲಿಗೆ ಬಿದ್ದಿದೆ.
ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಂಗೊಲ್ಲಿ ಗ್ರಾಮದ ಪ್ರೇಮ ಮತ್ತು ಕಣ್ಣನ್ ದಂಪತಿಯ ಕುಟುಂಬ ಸಂಕಷ್ಟ ಎದುರಿಸುತ್ತಿದೆ. ಎರಡು ವರ್ಷಗಳ ಮುಂಚೆ ಸಣ್ಣ ಮನೆಯಲ್ಲಿ ಹೇಗೋ ಜೀವನ ನಡೆಸುತ್ತಿದ್ದ ಕುಟುಂಬ 2018 ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಮನೆ ನೆಲಸಮವಾಗಿತ್ತು. ಅಂದಿನಿಂದ ಕೂಲಿ ಮಾಡುತ್ತಿದ್ದ ಕುಟುಂಬದ ಯಜಮಾನ ಕಣ್ಣನ್ ಅವರಿಗೆ ಇದ್ದಕ್ಕಿದ್ದಂತೆ ಕಣ್ಣು ಕಾಣಿಸದಂತೆ ಆಗಿತ್ತು. ನಂತರ ಮನೆಯ ಆಧಾರ ಸ್ಥಂಭವೇ ಇಲ್ಲದಂತೆ ಆಗಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೆ ಪಿಯುಸಿ ಓದುತ್ತಿದ್ದ ಮಗ ಜನಾರ್ಧನ್ ಕಾಲೇಜ್ ಬಿಟ್ಟು ಕೂಲಿ ಮಾಡಿ ಅಪ್ಪ, ಅಮನ್ನನ್ನು ಸಾಕುತ್ತಿದ್ದಾರೆ.
ಇದೀಗ ದೇಶಾದ್ಯಂತ ಗಾಳಿವೇಗದಲ್ಲಿ ಹಬ್ಬಿದ ಕೊರೊನಾ ಮಹಾಮಾರಿ ಕೂಲಿಯನ್ನೂ ಕಿತ್ತುಕೊಂಡಿದೆ. ತಾಯಿಗೆ ಚಿಕಿತ್ಸೆ ಕೊಡಿಸಲು ಒಂದೂವರೆ ಲಕ್ಷ ಸಾಲ ಮಾಡಿರುವ ಇನ್ನೂ ಏನೂ ಅರಿಯದ ಜನಾರ್ಧನ್, ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನಂತೆ. 2018ರ ಆಗಸ್ಟ್ ತಿಂಗಳಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಬಡಕುಟುಂಬ ಮನೆ ಕಟ್ಟಿಕೊಡುವಂತೆ ಸೆಪ್ಟೆಂಬರ್ ತಿಂಗಳಲ್ಲಿ ತಹಶೀಲ್ದಾರ್ ಗೆ ಮನವಿ ಕೊಟ್ಟಿದೆ. ಆದರೆ ಇದುವರೆಗೆ ಯಾವ ಅಧಿಕಾರಿಗಳು ಕ್ಯಾರೆ ಅಂದಿಲ್ಲ.
ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದ ಕುಟುಂಬಕ್ಕೆ ಜಿಲ್ಲಾಡಳಿತ ಕನಿಷ್ಠ ಬಾಡಿಗೆ ಹಣವನ್ನು ನೀಡಿಲ್ಲ. ಬಾಡಿಗೆ ಕಟ್ಟಲು ಹಣವಿಲ್ಲದೆ ಬಾಡಿಗೆ ಮನೆಯನ್ನು ಬಿಟ್ಟು ಬಂದು ಸದ್ಯ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದೇವೆ. ಗುಡಿಸಿಲಿನಲ್ಲಿ ಇಬ್ಬರು ಮಾತ್ರವೇ ಮಲಗಲು ಸಾಧ್ಯ. ಪತಿ ಹೊರಗೆ ಮಲಗುವ ಸ್ಥಿತಿ ಎದುರಾಗಿದೆ ಪ್ರೇಮ ಕಣ್ಣೀರಿಡುತ್ತಿದ್ದಾರೆ. ತಾವೇ ಮನೆ ನಿರ್ಮಿಸಿಕೊಳ್ಳಲು ಸಾಲ ಮಾಡಿ ಮನೆಯ ಅಡಿಪಾಯ ಹಾಕಿದ್ದಾರೆ. ಇದುವರೆಗೆ ಪರಿಹಾರ ನೀಡಿಲ್ಲ. ನಾವು ಬದುಕುವುದಾದರೂ ಹೇಗೆ ಎಂದು ಕುಟುಂಬ ರೋಧಿಸುತ್ತಿದೆ.