– ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ
ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ಭೀಕರ ಪ್ರವಾಹ ಮತ್ತೊಂದು ಕಡೆ ಮಹಾಮಾರಿ ಕೊರೊನಾದಿಂದ ಕೃಷ್ಣಾ ನದಿ ತೀರದ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಇದೀಗ ನದಿ ತೀರದ ರೈತರಿಗೆ ಬ್ಯಾಂಕ್ ಗಳಿಂದ ಬರುತ್ತಿರುವ ಬೆಳೆ ಸಾಲ ಮರು ಪಾವತಿಯ ನೊಟೀಸ್‍ಗಳು ರೈತರನ್ನ ಮತ್ತಷ್ಟು ಕಂಗೆಡಿಸಿವೆ. ನೆರೆ ಪ್ರವಾಹದಲ್ಲಿ ಬೆಳೆ, ಜಮೀನು ಕಳೆದುಕೊಂಡ ರೈತರಿಗೆ ಬ್ಯಾಂಕ್ ಗಳಿಂದ ಸಾಲ ಮರುಪಾವತಿ ಮಾಡುವಂತೆ ಕರೆ ಮಾಡಿ, ಮೆಸೇಜ್ ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ.
Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ರಾಮಗೌಡ ಪಾಟೀಲ್ ಎಂಬವರಿಗೆ ಬ್ಯಾಂಕ್ ನಿಂದ ಕಿರುಕುಳ ನೀಡಲಾಗುತ್ತಿದೆ. ಕಳೆದ ವರ್ಷ ಮತ್ತು ಈ ಬಾರಿ ಕೃಷ್ಣಾ ನದಿ ಪ್ರವಾಹಕ್ಕೆ ಬೆಳೆ ಕಳೆದುಕೊಂಡಿರುವ ರಾಮಗೌಡ 2018ರಲ್ಲಿ ಒಂದು ಲಕ್ಷ ಸಾಲ ಪಡೆದಿದ್ದರು. ಇದೀಗ 2 ಲಕ್ಷ 27 ಸಾವಿರ ಮರುಪಾವತಿ ಮಾಡುವಂತೆ ಬ್ಯಾಂಕ್ ನಿಂದ ಮೆಸೇಜ್ ಬಂದಿದ್ದು ಸೆಪ್ಟೆಂಬರ್ 30ರೊಳಗೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿದೆ.
Advertisement
Advertisement
ಕಲ್ಲೋಳ ಗ್ರಾಮದ 10ಕ್ಕೂ ಅಧಿಕ ರೈತರಿಗೆ ಸಾಲ ಕಟ್ಟುವಂತೆ ಫೋನ್ ಬರುತ್ತಿದೆ. ಬೆಳೆ ಹಾನಿ ಪರಿಹಾರ ಸಿಗದಿದ್ದರೂ ಈಗ ಸಾಲ ಮರುಪಾವತಿಗೆ ಬ್ಯಾಂಕ್ ಗಳು ಪಟ್ಟು ಹಿಡಿದಿವೆ. ಬ್ಯಾಂಕ್ ಕಿರುಕುಳಕ್ಕೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಪರಿಹಾರ ನೀಡುವರೆಗೆ ಬ್ಯಾಂಕ್ ಗಳ ಕಿರುಕುಳದಿಂದ ರಕ್ಷಣೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಕೃಷ್ಣಾ ನದಿ ತೀರದಲ್ಲಿ ಬೆಳೆದಿದ್ದ ಕಬ್ಬು, ಸೊಯಾಬಿನ್ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ಅನ್ನದಾತರದ್ದಾಗಿದೆ.
Advertisement
ಕೆಲ ದಿನಗಳ ಹಿಂದೆಯಷ್ಟೇ ಭೀಕರ ಪ್ರವಾಹ ಹಾಗೂ ಮಹಾಮಾರಿ ಕೊರೊನಾದಿಂದ ಕಂಗೆಟ್ಟಿರುವ ರೈತ ಕುಲಕ್ಕೆ ಈಗ ಗಾಯದ ಮೇಲೆ ಬರೆ ಎಳೆದಂಥ ಪರಿಸ್ಥಿತಿ ಎದುರಾಗಿದೆ. ಇತ್ತ ಪ್ರವಾಹದಿಂದ ಬೆಳೆದ ಬೆಳೆ ನಾಶವಾಗಿ ಹೋಗಿರುವ ದುಃಖದಲ್ಲಿ ಇದ್ದರೆ ಮಹಾಮಾರಿ ಕೊರೊನಾದಿಂದ ಬೆಳೆದ ಬೆಳೆಗೆ ಬೆಲೆಗೆ ಸಿಗದೆ ರೈತರು ಕಂಗಾಲಾಗಿರುವ ನಡುವೆಯೇ ಈಗ ಬೆಳೆ ಸಾಲ ಮರು ಪಾವತಿಸುವಂತೆ ಬ್ಯಾಂಕ್ ನವರು ಕಳಿಸುತ್ತಿರುವ ನೊಟೀಸ್ ಗೆ ರೈತರು ಕಂಗಾಲಾಗಿದ್ದಾರೆ.
ಪ್ರವಾಹ ಹಾಗೂ ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕಿದೆ. ರೈತರ ಸಾಲ ಮನ್ನಾ ಎಂದು ಹೇಳಿದರೂ ಯಾವುದೇ ಸಾಲಮನ್ನಾ ಆಗದೇ ಕಂಗಾಲಾಗಿರುವ ರೈತರಿಗೆ ಸರಕಾರ ಧೈರ್ಯ ತುಂಬಬೇಕಿದೆ. ಇನ್ನೂ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಬ್ಯಾಂಕ್ ಗಳಿಂದ ಆಗುತ್ತಿರುವ ಕಿರುಕುಳಕ್ಕೆ ಸರ್ಕಾರ ಬ್ರೆಕ್ ಹಾಕಬೇಕಿದೆ.