– ಬೆನ್ನು, ತಲೆಗೆ ಕೊಡಲಿಯಿಂದ ಏಟು
ಜೈಪುರ: ಭಾವಿ ಪತ್ನಿಯನ್ನ ಕೊಡಲಿಯಿಂದ ಕಡಿದು ಕೊಲೆಗೈದಿರುವ ಭಯಾನಕ ಘಟನೆ ರಾಜಸ್ಥಾನದ ನಾಗೌರ ಜಿಲ್ಲೆಯ ಶೇಡ್ಕನ್ ಗ್ರಾಮದಲ್ಲಿ ನಡೆದಿದೆ. ನಂಬಿಕೆಗಳ ಮೇಲೆ ಸಂಬಂಧಗಳು ಉಳಿದುಕೊಂಡಿರುತ್ತವೆ. ನಂಬಿಕೆ ಅಪನಂಬಿಕೆಯಲ್ಲಿ ಬದಲಾದಾಗ ಸಂಬಂಧಗಳು ಕಡಿತಗೊಳ್ಳುತ್ತವೆ. ಕೆಲವೊಂದು ಅಪರಾಧ ಪ್ರಕರಣಗಳಾಗಿ ಬದಲಾಗುತ್ತವೆ.
ಯುವಕ ಮಾತನಾಡಬೇಕೆಂದು ಹೇಳಿ ಭಾವಿ ಪತ್ನಿಯನ್ನ ತೋಟಕ್ಕೆ ಕರೆಸಿಕೊಂಡಿದ್ದಾನೆ. ತೋಟಕ್ಕೆ ಬಂದ ಯುವತಿ ಮೇಲೆ ಯುವಕ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ತಲೆ ಮತ್ತು ಬೆನ್ನಿನ ಭಾಗದಲ್ಲಿ ಬಲವಾದ ಏಟು ಬಿದ್ದ ಕಾರಣ ಯುವತಿ ಸ್ಥಳದಲ್ಲೇ ಸಾವನ್ನಪಿದ್ದಾಳೆ. ಈ ವೇಳೆ ತೋಟದಲ್ಲಿದ್ದ ಕೆಲಸಗಾರರು ದೌಡಾಯಿಸುವಷ್ಟರಲ್ಲಿ ಯುವತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಕೆಲಸಗಾರರು ಯುವತಿಯ ಕುಟುಂಬಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯ ಬಂಧನ ಆಗೋವರೆಗೂ ಶವವನ್ನ ಸ್ವೀಕರಿಸಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಆರೋಪಿಯನ್ನ ಬಂಧಿಸಿ, ಮರಣೋತ್ತರ ಶವ ಪರೀಕ್ಷೆ ನಡೆಸಿ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸಲಾಗಿದ್ದು, ಆತ ಯುವತಿಯನ್ನ ಅನುಮಾನಿಸುತ್ತಿದ್ದನು. ಯುವತಿಯನ್ನ ತೋಟಕ್ಕೆ ಕರೆಸಿಕೊಂಡು ಜಗಳವಾಡಿ ಕೊಲೆ ಮಾಡಿದ್ದಾನೆ ಎಂದು ನಾಗೌರ ಎಸ್‍ಪಿ ಶ್ವೇತಾ ಧನಕಡ್ ಹೇಳಿದ್ದಾರೆ.