ಶಿವಮೊಗ್ಗ: ರಾಜ್ಯದ ಬಹುತೇಕ ಕಡೆ ವರುಣ ಅಬ್ಬರಿಸಿದ್ದು, ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಆಗುಂಬೆ ಬಳಿ ಸಹ ಮಳೆ ವಿಪರೀತವಾಗಿ ಸುರಿಯುತ್ತಿದ್ದು, ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
Advertisement
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ನೀರು ಆಗುಂಬೆಯ ಭಾಗಗಳ ತೋಟ, ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಶಿವಮೊಗ್ಗ-ಆಗುಂಬೆ-ಮಂಗಳೂರು ಎನ್.ಹೆಚ್ 169-ಎ ರಸ್ತೆಯನ್ನು ಆಗುಂಬೆಯ ಸೋಮೇಶ್ವರದ ಬಳಿ ಬಂದ್ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
Advertisement
Advertisement
ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಸಹ ಇದೇ ಪರಿಸ್ಥಿತಿ ಇದ್ದು, ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ಭದ್ರಾವತಿಯ ಸೇತುವೆ ಮೇಲೆ ನೀರು ಹರಿಯಲು ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಸಂಚಾರ ಮಾಡುವುದನ್ನು ಪೊಲೀಸರು ಬಂದ್ ಮಾಡಿದ್ದಾರೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಜಲಾಶಯಕ್ಕೆ 55 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.
Advertisement
ಜಲಾಶಯದಿಂದ 47,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಇಂಜಿನಿಯರ್ ಸೂಚನೆ ನೀಡಿದ್ದಾರೆ. ಅಲ್ಲದೆ ಈಗಾಗಲೇ ಭದ್ರಾವತಿ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಸಹ ವಿಪರೀತ ಮಳೆಯಾಗುತ್ತಿದ್ದು, ಬ್ರಹ್ಮಾವರ ತಾಲೂಕಿನ ಸೀತಾನದಿ ಅಪಾಯ ಮಟ್ಟ ತಲುಪಿದ್ದು, ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ. ಸುತ್ತಮುತ್ತಲಿನ ಮನೆ ಕೃಷಿ ಭೂಮಿ ಭತ್ತದ ಬೇಸಾಯದ ಗದ್ದೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಮುಳುಗಡೆಯಾದ ಪ್ರದೇಶಗಳ ಜನರ ರಕ್ಷಣೆ ಮಾಡಲಾಗಿದೆ. ಸ್ಥಳೀಯ ನಾಡದೋಣಿ ಮೀನುಗಾರಿಕೆ, ಮರಳುಗಾರಿಕೆ ನಡೆಸುವವರ ದೋಣಿ ಬಳಸಿ ಜನರನ್ನು ಎತ್ತರ ಪ್ರದೇಶಗಳಿಗೆ ಕರೆದುಕೊಂಡು ಬರಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಶಾಲೆ, ದೇವಸ್ಥಾನಗಳಲ್ಲಿ ಉಳಿದುಕೊಳ್ಳಲು ಜನರಿಗೆ ವ್ಯವಸ್ಥೆ ಮಾಡಿದ್ದಾರೆ.