– ಭುಜದ ಮೇಲೆ ಶಿವನ ಟ್ಯಾಟೂ
– ನಂದಕಿಶೋರ್ ಅದ್ಭುತವಾಗಿ ನಿರ್ದೇಶಿಸಿದ್ದಾರೆ.
ಬೆಂಗಳೂರು: ನಾನು ಭಾರತ, ಇಲ್ಲಿನ ಜನರನ್ನು ಪ್ರೀತಿಸುತ್ತೇನೆ ಹಾಗೂ ಇಲ್ಲಿನ ದೇವರು, ಧಾರ್ಮಿಕ ನಂಬಿಕೆಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಪೊಗರು ಸಿನಿಮಾದ ಖಳ ನಟ ದಕ್ಷಿಣ ಆಫ್ರಿಕದ ಬಾಡಿ ಬಿಲ್ಡರ್ ಜಾನ್ ಲೋಕಸ್ ಹೇಳಿದ್ದಾರೆ.
ಪೊಗರು ಸಿನಿಮಾದ ಅನುಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡ ಅವರು, ನಾನು ಭಾರತಕ್ಕೆ 6 ವರ್ಷಗಳಿಂದ ಬರುತ್ತಿದ್ದೇನೆ. ಈ ಹಿಂದೆ ನಾಲ್ಕು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿದರು.
ದಾವಣಗೆರೆಯಲ್ಲಿನ ಸಿನಿಮಾ ಶೂಟಿಂಗ್ ವೇಳೆ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳುತ್ತಿದ್ದರು. ಇದು ನನಗೆ ಬಹಳ ಅದ್ಬುತ ಅನುಭವ ಎನಿಸಿತು. ಜೊತೆಗೆ ಪೊಗರು ಸಿನಿಮಾದ ಪೋಸ್ಟರ್‍ನನ್ನು ನಾನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ನನ್ನ ಸ್ನೇಹಿತರು, ಜನರ ಮಧ್ಯೆ ನಾನೊಬ್ಬ ರಾಕ್ ಸ್ಟಾರ್‍ನಂತೆ ಕಾಣಿಸುತ್ತಿರುವುದಾಗಿ ಹೇಳುತ್ತಿದ್ದಾರೆ ಎಂದರು.
ತಮ್ಮ ಕೈ ಮೇಲಿರುವ ಶಿವನ ಟ್ಯಾಟೂ ಕುರಿತಂತೆ ಮಾತನಾಡಿ, ನಾನು ಭಾರತವನ್ನು, ಭಾರತದ ಜನರನ್ನು ಪ್ರೀತಿಸುತ್ತೇನೆ. ಇಲ್ಲಿನ ದೇವರು, ಧಾರ್ಮಿಕ ನಂಬಿಕೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನನಗೆ ಆರು ವರ್ಷದಿಂದ ಈ ದೇಶದೊಂದಿಗೆ ಬಾಂಧವ್ಯವಿರುವುದರಿಂದ ನನ್ನ ಭುಜದ ಮೇಲೆ ಶಿವನ ಟ್ಯಾಟೂವನ್ನು ಹಾಕಿಸಿಕೊಂಡಿದ್ದೇನೆ ಎಂದು ನುಡಿದರು.
ಇನ್ನೂ ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಹೊಂದಿದ್ದೇನೆ, ಇಲ್ಲಿನ ಜನರು ಸಿನಿಮಾಕ್ಕೆ, ಕಲಾವಿದರಿಗೆ, ರಾಜಕಾರಣಿಗಳಿಗೆ ಬಹಳ ಬೆಂಬಲ ನೀಡುವುದನ್ನು ನೋಡಿದ್ದೇನೆ. ಹಾಗೆಯೇ ಪೊಗರು ಸಿನಿಮಾದ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿ ನಮಗೆ ಬೆಂಬಲ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅದ್ಭುತ ಪ್ರತಿಭೆ ಹೊಂದಿದ್ದು, ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದು ಖುಷಿತಂದಿದೆ. ಸಿನಿಮಾದಲ್ಲಿ ಅಭಿನಯಿಸಿರುವವರೆಲ್ಲರೂ ವೃತ್ತಿಪರರೇ ಆಗಿದ್ದು, ಇದೊಂದು ಪ್ರೊಫೆಶನಲ್ ಸಿನಿಮಾ ಆಗಿದೆ. ಅಲ್ಲದೆ ಸಿನಿಮಾದಲ್ಲಿ ಹಲವಾರು ಬಾಡಿ ಬಿಲ್ಡರ್ಸ್‍ಗಳು ಅಭಿನಯಿಸಿದ್ದು, ನಿರ್ದೇಶಕ ನಂದ ಕಿಶೋರ್ ಊಹಿಸಲಾಗದಷ್ಟು ಅದ್ಭುತವಾಗಿ ನಿರ್ದೇಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.