ವಾಷಿಂಗ್ಟನ್: ವೀಸಾ ಸಂಖ್ಯೆ ನಿರ್ಬಂಧಿಸಿ ಡೊನಾಲ್ಡ್ ಟ್ರಂಪ್ ಹೊರಡಿಸಿದ ಆದೇಶವನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ರದ್ದುಪಡಿಸುವ ಮೂಲಕ ಭಾರತೀಯ ಟೆಕ್ಕಿಗಳಿಗೆ ಸಂತಸದ ಸುದ್ದಿ ನೀಡಿದೆ.
ವಿದೇಶಿ ನೌಕರರಿಗೆ ಪ್ರತಿವರ್ಷ ಮಂಜೂರು ಮಾಡುವ ವೀಸಾ ಸಂಖ್ಯೆ ನಿರ್ಬಂಧಿಸಿ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ನಿಯಮವನ್ನು ಹೊರಡಿಸಲಾಗಿತ್ತು. ಎಚ್1ಬಿ(ಅಮೆರಿಕಾಕ್ಕೆ ವಿದೇಶೀಯರು ಉದ್ಯೋಗ ಮಾಡಲು ತೆರಳುವುದಕ್ಕೆ ಅಲ್ಲಿನ ಸರ್ಕಾರ ನೀಡುವ ತಾತ್ಕಾಲಿಕ ನೌಕರಿ ವೀಸಾ) ವೀಸಾಕ್ಕೆ ಅರ್ಜಿ ಸಲ್ಲಿಸುವ ನಿಯಮವನ್ನು ಅಕ್ಟೋಬರ್‍ನಲ್ಲಿ ಬದಲಾಯಿಸಲಾಗಿತ್ತು.
Advertisement
Advertisement
ವಲಸೆಗಳನ್ನು ನಿಯಂತ್ರಿಸಲು ವ್ಯಾಪಕ ಯೊಜನೆ ಅಂಗವಾಗಿ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳ ಮುಂಚೆ ಟ್ರಂಪ್ ಆಡಳಿತ ಹೊಸ ನಿಯಮ ಪ್ರಕಟಿಸಿದ್ದರು. ಇದನ್ನು ಕೋರ್ಟ್‍ನಲ್ಲಿ ಹಲವರು ಪ್ರಶ್ನೆ ಮಾಡಿದ್ದರು. ಕೊರೊನಾ ಸೋಂಕು ಹಾವಳಿಯಿಂದ ಉದ್ಯೋಗ ಕಳೆದುಕೊಂಡಿರುವುದರಿಂದ ವಿದೇಶಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವುದು ಅಗತ್ಯ ಎಂದು ಅಮೆರಿಕ ಸರ್ಕಾರ ಸಮರ್ಥಿಸಿಕೊಂಡಿತ್ತು.
Advertisement
ತೀರ್ಪಿನಿಂದಾಗಿ ಡಿಸೆಂಬರ್ 7ರಿಂದ ಜಾರಿಗೆ ಬರಬೇಕಿದ್ದ ಉದ್ಯೋಗಗಳು ಮತ್ತು ಇತರ ವಿಷಯಗಳ ಬಗೆಗಿನ ಭದ್ರತಾ ಇಲಾಖೆಯ ನಿಯಮಗಳು ರದ್ದಾಗಲಿದೆ. ಜೊತೆಗೆ ಅಕ್ಟೋಬರ್ 8ರಿಂದ ಜಾರಿಗೆ ಬಂದಿದ್ದ ವೇತನದ ಮೇಲಿನ ಕಾರ್ಮಿಕ ಇಲಾಖೆಯ ನಿಯಮವೂ ಮಾನ್ಯತೆ ಕಳೆದುಕೊಳ್ಳಲಿದೆ.
Advertisement
ಕೋರ್ಟ್ ಹೇಳಿದ್ದು ಏನು?
ಇತ್ತೀಚಿನ ವರ್ಷಗಳಲ್ಲಿ ಎಚ್1ಬಿ ವೀಸಾಕ್ಕೆ ಸಲ್ಲಿಸಲಾದ ಅರ್ಜಿಗಳು ಪೈಕಿ ಕನಿಷ್ಟ ಮೂರನೇ ಒಂದರಷ್ಟು ಅರ್ಜಿಗಳನ್ನು ಹೊಸ ನಿಯಮದನ್ವಯ ತಿರಸ್ಕರಿಸುವ ಸಂಭವವಿದೆ. ನಿಯಮಗಳನ್ನು ಬದಲಾಯಿಸುವಾಗ ಸರ್ಕಾರ ಪಾರದರ್ಶಕತೆಯನ್ನು ಪಾಲಿಸಲಿಲ್ಲ. ಕೊರೊನಾ ಮಹಾಮಾರಿಯಿಂದ ಸೃಷ್ಟಿಯಾದ ನಿರುದ್ಯೋಗ ಸಮಸ್ಯೆ ಎದುರಿಸುವ ತುರ್ತು ಕ್ರಮವಿದು ಎಂಬ ವಾದದಲ್ಲಿ ಅರ್ಥವಿರಲಿಲ್ಲ. ಯಾಕೆಂದರೆ ಟ್ರಂಪ್ ಆಡಳಿತ ಮೊದಲೇ ಈ ರೀತಿಯ ಚಿಂತನೆ ಹೊಂದಿದ್ದು, ಅಕ್ಟೋಬರ್‍ನಲ್ಲಿ ಅದನ್ನು ಪ್ರಕಟಿಸಿದೆ ಎಂದು ಜಿಲ್ಲಾ ನ್ಯಾಯಾಧೀಶ ಜಿಫ್ರಿ ವೈಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸೇರಿ ಹಲವು ದೇಶಗಳ ಮಾಹಿತಿ ತಂತ್ರಜ್ಞಾನ (ಐಟಿ) ಪದವೀಧರರು ಅಮೆರಿಕಾದಲ್ಲಿ ಉದ್ಯೋಗಕ್ಕಾಗಿ ಎಚ್1ಬಿಯನ್ನು ನೆಚ್ಚಿಕೊಂಡಿದ್ದಾರೆ. ಅಮೆರಿಕ ಪ್ರತಿವರ್ಷ ಐಟಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರ ಸಹಿತ ಹಲವು ರಂಗಗಳಲ್ಲಿ ಸುಮಾರು 85,000 ಎಚ್1ಬಿ ವೀಸಾ ನೀಡುತ್ತದೆ. ಮೂರು ವರ್ಷ ಅವಧೀಯ ಈ ವೀಸಾವನ್ನು ನವೀಕರಿಸಬಹುದಾಗಿದೆ. ಅಮೆರಿಕಾದಲ್ಲಿ ಎಚ್1ಬಿ ವೀಸಾ ಹೊಂದಿರುವ ಸುಮಾರು 6ಲಕ್ಷ ಜನರಲ್ಲಿ ಭಾರತ ಮತ್ತು ಚೀನಾದವರು ಹೆಚ್ಚಾಗಿದ್ದಾರೆ.
ಟ್ರಂಪ್ ಆದೇಶ ಏನಿತ್ತು?
2020 ಅಂತ್ಯದವರೆಗೆ ಎಚ್1ಬಿ, ಎಚ್ 2ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಉದ್ಯೋಗ ವೀಸಾಗಳನ್ನು ರದ್ದು ಪಡಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಉದ್ಯೋಗಿಗಳನ್ನು ಅಮೆರಿಕಾಕ್ಕೆ ಕಳುಹಿಸುವ ಭಾರತೀಯ ಕಂಪನಿಗಳಿಗೆ ಇದರಿಂದ ಹೊಡೆತ ಬಿದ್ದಿತ್ತು.
ಸರಕಾರದ ಈ ನಿರ್ಧಾರದಿಂದ ಅಮೆರಿಕದ ಆರ್ಥಿಕತೆಗೆ ಭವಿಷ್ಯದಲ್ಲಿ ಪೆಟ್ಟು ಬೀಳುತ್ತದೆ. ನೂರಾರು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಲಿದೆ. ಇದೊಂದು ವಿವಾದಿತ ಕ್ರಮವಾಗಿದ್ದು ಆದೇಶ ಹಿಂಪಡೆಯುವಂತೆ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಟ್ರಂಪ್ ಹೊರಡಿಸಿದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.