ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸತತ ಮೂರು ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್‌ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ.
ಸದ್ಯ ರಾಹುಲ್ 9 ಪಂದ್ಯಗಳಿಂದ 525 ರನ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಷ್ಟೇ ಪಂದ್ಯಗಳನ್ನು ಆಡಿರುವ ಮಯಾಂಕ್ 393 ರನ್ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2ನೇ ಸೂಪರ್ ಓವರಿನಲ್ಲಿ ಬುಮ್ರಾ ಬೌಲಿಂಗ್ ಮಾಡದಿರಲು ಕಾರಣವೇನು?
2019ರಲ್ಲಿ ರಾಹುಲ್ 14 ಪಂದ್ಯಗಳಿಂದ 593 ರನ್ ಹೊಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಳೆದ ವರ್ಷ ಡೇವಿಡ್ ವಾರ್ನರ್ 12 ಪಂದ್ಯಗಳಿಂದ 692 ರನ್ ಹೊಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದರು.
2018ರಲ್ಲಿ ರಾಹುಲ್ 14 ಪಂದ್ಯಗಳನ್ನು ಆಡುವ ಮೂಲಕ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಹೈದರಾಬಾದ್ ಆಟಗಾರ ಕೇನ್ ವಿಲಿಯಮ್ಸನ್ 17 ಪಂದ್ಯವಾಡಿ 735 ರನ್ ಬಾರಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. 14 ಪಂದ್ಯವಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ 684 ರನ್ ರನ್ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.
ಕ್ರಿಕೆಟ್ ಇತಿಹಾಸದಲ್ಲಿ 2 ಸೂಪರ್ ಓವರ್ ಕಂಡ ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯದಲ್ಲಿ ರಾಹುಲ್ 77 ರನ್(51 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು. ಈ ಆಟಕ್ಕೆ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.