ಮುಂಬೈ: ಅಮೆರಿಕದ ಬ್ಯಾಂಕಿಂಗ್ ಕಂಪನಿ `ಸಿಟಿಬ್ಯಾಂಕ್’ ಭಾರತದಲ್ಲಿ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.
ದೇಶದಲ್ಲಿ ಸಿಟಿ ಬ್ಯಾಂಕ್ ಒಟ್ಟು 35 ಶಾಖೆಗಳನ್ನು ಹೊಂದಿದ್ದು, ಕ್ರೆಡಿಟ್ ಕಾರ್ಡ್, ಗೃಹ ಸಾಲ, ಸಂಪತ್ತು ನಿರ್ವಹಣೆ ಸೇವೆಗಳನ್ನು ನೀಡುತ್ತಿದೆ. ಅಂದಾಜು ನಾಲ್ಕು ಸಾವಿರ ಸಿಬ್ಬಂದಿ ಸಂಸ್ಥೆಯ ಗ್ರಾಹಕ ಬ್ಯಾಂಕಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
Advertisement
ಒಟ್ಟು 13 ದೇಶಗಳಲ್ಲಿ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಈ ದೇಶಗಳಲ್ಲಿ ಇತರರಿಗೆ ಸ್ಪರ್ಧೆ ನೀಡಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ದೊಡ್ಡದಾಗಿ ಬೆಳೆದಿಲ್ಲದ ಕಾರಣ ಈ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಕಟಿಸುತ್ತಿದ್ದೇವೆ ಎಂದು ಸಿಟಿಬ್ಯಾಂಕ್‍ನ ಜಾಗತಿಕ ವಹಿವಾಟುಗಳ ಸಿಇಒ ಜೇನ್ ಫ್ರೇಸರ್ ಗುರುವಾರ ಹೇಳಿದ್ದಾರೆ.
Advertisement
Advertisement
ಸಿಟಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಶು ಖುಲ್ಲರ್ ಪ್ರತಿಕ್ರಿಯಿಸಿ, ತಕ್ಷಣಕ್ಕೆ ನಮ್ಮ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬ್ಯಾಂಕ್ ತನ್ನ ಸೇವೆಗಳನ್ನು ಸ್ಥಗಿತಗೊಳಿಸಲು ಕಾನೂನು ಜಾರಿ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ. ಈ ಘೋಷಣೆಯಿಂದ ಉದ್ಯೋಗಿಗಳ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಸದ್ಯಕ್ಕೆ ನಮ್ಮ ಗ್ರಾಹಕರಿಗೆ ಸೇವೆ ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
Advertisement
1902ರಲ್ಲಿ ಭಾರತಕ್ಕೆ ಬಂದ ಸಿಟಿಬ್ಯಾಂಕ್ 1985ರಿಂದ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಗುರುಗ್ರಾಮದಲ್ಲಿ ಇರುವ ತನ್ನ ಕೇಂದ್ರಗಳಿಂದ ಜಾಗತಿಕ ವಾಣಿಜ್ಯ ವಹಿವಾಟುಗಳಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸಲಿದೆ.
ಕೃಷಿ, ವಸತಿ, ನವೀಕರಿಸಬಹುದಾದ ಇಂಧನ ಮತ್ತು ಎಂಎಸ್‍ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ) ಮಾರ್ಚ್ 2020ರ ವೇಳೆಗೆ ಒಟ್ಟು 27,911 ಕೋಟಿ ರೂ. ಸಾಲವನ್ನು ಸಿಟಿಬ್ಯಾಂಕ್ ನೀಡಿದೆ.
ಎಲ್ಲ ವರ್ಗದ ಜನರಿಗೆ ಸಿಟಿಬ್ಯಾಂಕ್ ಸೇವೆ ನೀಡಿದ್ದರೂ ವಿಶೇಷವಾಗಿ ಜಾಗತಿಕ ಕಂಪನಿಯ ನೌಕರರು ಮತ್ತು ಹೆಚ್ಚು ಸಂಬಳ ಇದ್ದ ನೌಕರರಿಗೆ ವಿಶೇಷ ಸೇವೆಗಳನ್ನು ನೀಡುತ್ತಿತ್ತು.