ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್‌

Public TV
2 Min Read
sundar pichai and modi

ಬೆಂಗಳೂರು: ಮುಂದಿನ ದಿನಗಳಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಅದರಲ್ಲೂ ಭಾರತದಲ್ಲಿ ಭಾರೀ ಬೆಳವಣಿಗೆ ಆಗಲಿದೆ ಎಂಬುದನ್ನು ಊಹಿಸಿರುವ ಬಹುರಾಷ್ಟ್ರೀಯ ಕಂಪನಿಗಳು ಈಗ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದು, ಗೂಗಲ್‌ ಒಟ್ಟು 10 ಶತಕೋಟಿ ಡಾಲರ್‌(75 ಸಾವಿರ ಕೋಟಿ ರೂ.) ಹೂಡಿಕೆ ಮಾಡುವುದಾಗಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಬಳಿಕ ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಡಿಜಿಟೈಸೇಶನ್‌ಗಾಗಿ ಗೂಗಲ್‌ ಕಂಪನಿ 10 ಶತಕೋಟಿ ಡಾಲರ್‌ ಫಂಡ್‌ ಘೋಷಿಸಲು ಬಹಳ ಉತ್ಸುಕನಾಗಿದ್ದೇನೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಮುಂದಿನ 5-7 ವರ್ಷಗಳಲ್ಲಿ ನಾವು 75 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತೇವೆ. 100 ಕೋಟಿ ಜನ ಆನ್‌ಲೈನ್‌ಗೆ ಬರುವ ಮೂಲಕ ದೇಶ ಪ್ರಗತಿಯನ್ನು ಸಾಧಿಸಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ದತ್ತಾಂಶ ಮತ್ತು ವಿಶ್ವ ದರ್ಜೆಯ ಟೆಲಿಕಾಂ ಮೂಲಸೌಕರ್ಯಗಳು ಈ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಪಿಚೈ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

4 ಕ್ಷೇತ್ರದಲ್ಲಿ ಹೂಡಿಕೆ:
1. ಮೊದಲನೆಯದಾಗಿ ಸ್ಥಳೀಯ ಭಾಷೆಗಳಲ್ಲಿ ಸುಲಭವಾಗಿ ಜನರ ಕೈಗೆ ಮಾಹಿತಿ ಒದಗಿಸುವುದು.
2. ಭಾರತದ ವಿಶಿಷ್ಟ ಅಗತ್ಯಕ್ಕೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ತಯಾರಿಸುವುದು.
3. ಡಿಜಿಟಲ್‌ ರೂಪಾಂತರ ವ್ಯವಹಾರಕ್ಕೆ ಪ್ರೋತ್ಸಾಹಿಸುವುದು.
4. ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌(ಎಐ) ಅನ್ನು ಸಾಮಾಜಿಕ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳುವುದು.

ಸುಂದರ್‌ ಪಿಚೈ ಜೊತೆಗಿನ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ಇಂದು ಬೆಳಗ್ಗೆ ಸುಂದರ್‌ ಪಿಚೈ ಅವರ ಜೊತೆ ಅತ್ಯಂತ ಫಲಪ್ರದವಾದ ಸಂವಾದ ನಡೆಸಿದ್ದೇನೆ. ನಾವು ಬಹಳಷ್ಟು ವಿಚಾರಗಳ ಕುರಿತು ಮಾತನಾಡಿದ್ದೇವೆ. ವಿಶೇಷವಾಗಿ ತಂತ್ರಜ್ಞಾನದ ಶಕ್ತಿಯ ಮೂಲಕ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *