ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2.75 ಲಕ್ಷಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 10 ಸಾವಿರ ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡು ಈ ಮಹಾಮಾರಿ ಇಂದು ವಿಶ್ವಕ್ಕೆ ಕಂಟಕವಾಗಿದೆ. ಭಾರತದಲ್ಲಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದರು ಕೊರೊನಾ ವೈರಸ್ ಮಾತ್ರ ತನ್ನ ಹರಡುವಿಕೆಯನ್ನು ನಿಲ್ಲಿಸಿಲ್ಲ. ಈ ನಡುವೆ ಭಾರತದಲ್ಲಿ ಲಾಕ್‍ಡೌನ್ ಅನ್ನು ಸಡಿಲಿಕೆ ಮಾಡಿದ್ದು, ಕೊರೊನಾ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10 ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೆಚ್ಚು ಕಂಡು ಬಂದಿರುವುದು ಮಹಾರಾಷ್ಟ್ರದಲ್ಲಿ, ಇಲ್ಲಿ ಬುಧವಾರ ಒಂದೇ ದಿನಕ್ಕೆ ಸುಮಾರು 3,254 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ತಮಿಳುನಾಡಿನಲ್ಲೂ ಕೊರೊನಾ ಸ್ಫೋಟಗೊಂಡಿದ್ದು, ಭಾರತದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ.45ರಷ್ಟು ಪ್ರಕರಣಗಳು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿವೆ.
ಭಾರತದಲ್ಲಿ ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದವರ ಸಂಖ್ಯೆ 7,745ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಸುಮಾರು 274 ಮಂದಿ ಕೊರೊನಾದಿಂದ ಭಾರತದಲ್ಲಿ ಮೃತಪಟ್ಟಿದ್ದಾರೆ. ಸಾವಿನ ಅಂಕಿಅಂಶದಲ್ಲೂ ಭಾರತದಲ್ಲಿ ಮಹಾರಾಷ್ಟ್ರವೇ ಮುಂದೆ ಇದ್ದು, ಸುಮಾರು 3,289 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಮಹಾರಾಷ್ಟ್ರದಲ್ಲಿ 94,041 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 44,517 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 46,074 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದಲ್ಲಿ 2.75 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 1.35 ಲಕ್ಷ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸುಮಾರು 7,745 ಜನರು ಸಾವನ್ನಪ್ಪಿದ್ದಾರೆ. 94,041 ಕೊರೊನಾ ಪ್ರಕರಣಗಳಿಂದ ಮಹಾರಾಷ್ಟ್ರ ಭಾರತದಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, 35 ಸಾವಿರ ಕೊರೊನಾ ಸೋಂಕಿತರನ್ನು ಹೊಂದಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿ ಇದೆ. ಇನ್ನೂ 31,309 ಸೋಂಕಿತರಿರುವ ನವದೆಹಲಿ ಮೂರನೇ ಸ್ಥಾನದಲ್ಲಿದೆ.