ನವದೆಹಲಿ: ಭಾರತದಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೆ ಮೊದಲ ಬಾರಿಗೆ ಚಿನ್ನದ ಬೆಲೆ 50 ಸಾವಿರ ರೂ. ಗಡಿ ದಾಟಿದೆ.
10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬೆಂಗಳೂರಿನಲ್ಲಿ 50,720 ರೂ. ಆಗಿದ್ದರೆ ಚೆನ್ನೈನಲ್ಲಿ 51,380 ರೂ. ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 46,520 ರೂ.ಗೆ ಏರಿಕೆ ಆಗಿದ್ದರೆ ಚೆನ್ನೈನಲ್ಲಿ 47,100 ರೂ. ತಲುಪಿದೆ.
Advertisement
Advertisement
Advertisement
ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು 1 ಕೆಜಿ ಬೆಳ್ಳಿ ದರ 61,280 ರೂ. ಗೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಬೆಳ್ಳಿ ದರ 8,500 ರೂ. ಏರಿಕೆ ಕಂಡಿದೆ. 7 ವರ್ಷದ ಬಳಿಕ ಭಾರತದಲ್ಲಿ ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ.
Advertisement
ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ 1 ಔನ್ಸ್( 28.3 ಗ್ರಾಂ) ಚಿನ್ನದ ಬೆಲೆ ಶೇ.1.3 ರಷ್ಟು ಏರಿಕೆಯಾಗಿ 1,865.81 ಡಾಲರ್(1.39 ಲಕ್ಷ ರೂ.) ತಲುಪಿದೆ. 1 ಔನ್ಸ್ ಬೆಳ್ಳಿಯ ಬೆಲೆ ಶೇ.7.2 ರಷ್ಟು 22.8366 ಡಾಲರ್(1,700 ರೂ. )ಏರಿಕೆಯಾಗಿದೆ. 9 ವರ್ಷಗಳ ಬಳಿಕ ದರ ಭಾರೀ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತದಲ್ಲೂ ಚಿನ್ನದ ದರ ಏರಿಕೆಯಾಗಿದೆ. ಇದನ್ನೂ ಓದಿ: ಚಿನ್ನ ಸ್ಮಗ್ಲಿಂಗ್ ಕೇಸ್ – ಮಗಳಿಂದಾಗಿ ಬೆಂಗಳೂರಿನಲ್ಲಿ ಅಡಗಿದ್ದ ಸ್ವಪ್ನ ಸುರೇಶ್ ಅರೆಸ್ಟ್
ಭಾರತದಲ್ಲಿ ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಶುಲ್ಕ ಇರುವ ಕಾರಣ ಆಭರಣದ ಬೆಲೆ ಮತ್ತಷ್ಟು ಜಾಸ್ತಿಯಾಗುತ್ತದೆ.
ಬೆಲೆ ಜಾಸ್ತಿಯಾಗಲು ಕಾರಣವೇನು?
ಕೋವಿಡ್ 19 ನಿಂದಾಗಿ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಬಂದಿದೆ. ಹಣಕ್ಕೆ ಸಮಸ್ಯೆಯಾಗಿರುವಾಗ ಯಾರು ಆಭರಣ ಖರೀದಿಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ. ಆದರೆ ಇಲ್ಲಿ ಆಭರಣಕ್ಕೆ ಚಿನ್ನ ಖರೀದಿಸುತ್ತಿಲ್ಲ. ಬದಲಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿದೆ.
ಕೋವಿಡ್ 19ನಿಂದಾಗಿ ಹೂಡಿಕೆದಾರರು ಸುರಕ್ಷಿತ ವಸ್ತು, ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕ ಮತ್ತು ಯುರೋಪ್ ಹೂಡಿಕೆದಾರರು ಚಿನ್ನದ ಬಾಂಡ್‌ಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಚಿನ್ನಕ್ಕೆ ಬೇಡಿಕೆ ಜಾಸ್ತಿಯಿದೆ. ಈಗ ಹೂಡಿಕೆಯಿಂದಾಗಿ ಬೇಡಿಕೆ ಮತ್ತಷ್ಟು ಜಾಸ್ತಿಯಾಗಿದೆ. ಆದರೆ ಪೂರೈಕೆ ಕಡಿಮೆಯಿದೆ. ಹೀಗಾಗಿ ಕೋವಿಡ್ 19 ಅವಧಿಯಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ.
24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.