ಕೊಲಂಬೋ: ಬಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡುವ ನೆಪದಲ್ಲಿ ಆ ದೇಶವನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡುತ್ತಿದ್ದ ಚೀನಾಕ್ಕೆ ಶ್ರೀಲಂಕಾ ಶಾಕ್ ನೀಡಿದೆ. ಭಾರತ ವಿರುದ್ಧದ ಕಾರ್ಯತಂತ್ರಗಳಿಗೆ ಶ್ರೀಲಂಕಾವನ್ನು ‘ವೇದಿಕೆ’ಯನ್ನಾಗಿ ಬಳಸಿಕೊಳ್ಳಲು ಚೀನಾಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಸರ್ಕಾರ ತಿಳಿಸಿದೆ.
ಭಾರತಕ್ಕೆ ಮೊದಲ ಪ್ರಾಶಸ್ತ್ಯ ನೀಡಲು ಶ್ರೀಲಂಕಾ ಮುಂದಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜಯನಾಥ್ ಕೊಲಂಬೇಜ್ ಹೇಳಿದ್ದಾರೆ. ಕೊಲೊಂಬೊದ ‘ಡೈಲಿ ಮಿರರ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ರಾಜಪಕ್ಸೆ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
Advertisement
Advertisement
Advertisement
ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿ ಚೀನಾ ಆಗಿದ್ದರೆ ಆರನೇ ಅತಿದೊಡ್ಡ ಆರ್ಥಿಕ ಶಕ್ತಿ ಭಾರತ. 2018 ರಲ್ಲಿ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಹೀಗಾಗಿ ನಾವು ಎರಡು ಆರ್ಥಿಕ ಪ್ರಬಲ ದೇಶಗಳ ನಡುವೆ ಇದ್ದೇವೆ. ಈ ಸಂದರ್ಭದಲ್ಲಿ ಅನ್ಯ ದೇಶವೊಂದು ಇನ್ನೊಂದು ದೇಶಕ್ಕೆ ಅದರಲ್ಲೂ ಭಾರತಕ್ಕೆ ಹಾನಿ ಮಾಡಲು ನಮ್ಮ ದೇಶವನ್ನು ವೇದಿಕೆಯನ್ನಾಗಿ ಮಾಡಲು ಬಿಟ್ಟಿಲ್ಲ ಮತ್ತು ಬಿಡಬಾರದು. ಅಷ್ಟೇ ಅಲ್ಲದೇ ಮುದೆಯೂ ಬಿಡುವುದಿಲ್ಲ ಎಂದು ತಮ್ಮ ಸ್ಪಷ್ಟ ಮಾತುಗಳಿಂದ ತಿಳಿಸಿದ್ದಾರೆ.
Advertisement
ಶ್ರೀಲಂಕಾದ ಹೊಸ ಸರ್ಕಾರ ಚೀನಾ ಪರವಾಗಿದೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಈಗ ನಾವು ಭಾರತದ ಪರ ಎಂದು ನೇರವಾಗಿಯೇ ಹೇಳುವ ಮೂಲಕ ಚೀನಾಗೆ ಶಾಕ್ ನೀಡಿದೆ. ಇದನ್ನೂ ಓದಿ: 3.2 ಶತಕೋಟಿ ಡಾಲರ್ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ
ಶ್ರೀಲಂಕಾ ನೌಕಾಪಡೆಯ ಮಾಜಿ ಕಮಾಂಡರ್ ಆಗಿದ್ದ ಕೊಲಂಬೇಜ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಹೆಚ್ಚುವರಿ ಕಾರ್ಯದರ್ಶಿ (ವಿದೇಶಾಂಗ ವ್ಯವಹಾರ) ಆಗಿದ್ದರು.
ಭಾರತದ ಶಕ್ತಿಯನ್ನು ಕಡಿಮೆ ಮಾಡಿ ಏಷ್ಯಾದಲ್ಲಿ ತನ್ನ ಪ್ರಭುತ್ವ ಸ್ಥಾಪಿಸಲು ಚೀನಾ ಏಷ್ಯನ್ ದೇಶಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವುದು ಹೊಸ ವಿಚಾರವಲ್ಲ. ಶ್ರೀಲಂಕಾದ ಹಂಬನ್‌ತೋಟ ಎಂಬಲ್ಲಿ ಬಂದರು ನಿರ್ಮಿಸಿಲು ಚೀನಾ ಈಗಾಗಲೇ ಆರ್ಥಿಕ ನೆರವು ನೀಡಿದೆ. ಆದರೆ ಈ ಸಾಲ ತೀರಿಸಲಾಗದ ಶ್ರೀಲಂಕಾ ಸದ್ಯ ಬಂದರನ್ನು ಚೀನಾಕ್ಕೆ 99 ವರ್ಷಗಳ ಕಾಲ ಗುತ್ತಿಗೆ ನೀಡಿದೆ.
ಚೀನಾದ ತಂತ್ರ ಏನು?
ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಚೀನಾ ಆ ದೇಶಗಳಲ್ಲಿ ಭಾರೀ ಮೊತ್ತದ ಯೋಜನೆಗಳನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಟೆಂಡರ್ ಕರೆದಾಗ ಕಡಿಮೆ ಬೆಲೆಗೆ ಬಿಡ್ ಮಾಡುತ್ತದೆ. ಈ ಯೋಜನೆಗೆ ಚೀನಾದ ಬ್ಯಾಂಕುಗಳೇ ದೇಶಗಳಿಗೆ ಸಾಲ ನೀಡುವಂತೆ ನೋಡಿಕೊಳ್ಳುತ್ತದೆ. ಈ ಯೋಜನೆ ಸಾಲ ತೀರಿಸಲು ಆ ದೇಶಗಳಿಗೆ ಸಾಧ್ಯವಾಗದೇ ಇದ್ದಾಗ ಈ ಯೋಜನೆಯ ನೆಪ ಹೇಳಿ ಮತ್ತೊಂದು ಯೋಜನೆ ಆರಂಭಿಸಲು ಅನುಮತಿ ಕೇಳುತ್ತದೆ. ಹೀಗೆ ಒಂದೊಂದೆ ಯೋಜನೆ ಆರಂಭಿಸಿ ಈ ದೇಶವನ್ನು ತನ್ನ ದಾಳವನ್ನಾಗಿ ಮಾಡುತ್ತದೆ. ಸದ್ಯ ಪಾಕಿಸ್ತಾನದಲ್ಲಿ ಹೀಗೆ ಆಗುತ್ತಿದ್ದು, ಚೀನಾ ಹೇಳಿದಂತೆ ಅಲ್ಲಿನ ಸರ್ಕಾರ ಈಗ ಕುಣಿಯುತ್ತಿದೆ.