ಮಡಿಕೇರಿ: ಕೊಡಗಿನ ಜನರ ಅಚಾರ, ವಿಚಾರ, ಪದ್ಧತಿ, ಧಾರ್ಮಿಕ ಅಚರಣೆಗಳಿಗೆ ಕೊಡಗಿನ ತಲಕಾವೇರಿಯ ಭಾಗಮಂಡಲದ ಭಂಗಡೇಶ್ವರ ದೇವಾಲಯ ಪ್ರಸಿದ್ಧ. ಅದರಲ್ಲೂ ಸತ್ತವರ ಪಿಂಡ ಪ್ರದಾನವನ್ನು ಭಾಗಮಂಡಲ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಾಡುವುದು ವಾಡಿಕೆ. ಆದರೆ ಕೋವಿಡ್ ಬಳಿಕ ಜನರಲ್ಲಿ ಗೊಂದಲ ಉಂಟಾಗಿತ್ತು. ಇದಕ್ಕೆ ಸ್ವತಃ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟನೆ ನೀಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಸ್ಥಿ ಬಿಡಲು ತಡೆ ನೀಡಿಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಇದುವರೆಗೆ ಯಾವುದೇ ತಡೆ ನೀಡಿಲ್ಲ. ಜನ ಗೊಂದಲಕ್ಕೊಳಗಾಗಬಾರದು ಎಂದು ದೇವಾಲಯ ಸಮಿತಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಲಾಕ್‍ಡೌನ್ ಇರುವುದರಿಂದ ಐದು ಜನ ಮೀರದಂತೆ ಪಿಂಡ ಪ್ರದಾನ ಮಾಡಲು ನಿಯಮ ಜಾರಿಯಲ್ಲಿ ಇದೆ. ದೇವಾಲಯ ಸಮಿತಿಯ ಪೂರ್ವಾನುಮತಿ ಪಡೆದು ಪಿಂಡ ಪ್ರದಾನ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪಿಂಡ ಪ್ರದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ – ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ
ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿದರೆ ಮೋಕ್ಷ ಲಭಿಸುವ ನಂಬಿಕೆ ಕೊಡಗಿನ ಜನರದ್ದಾಗಿದೆ. ಅಲ್ಲದೆ ತಲಾಂತರಗಳಿಂದ ತ್ರಿವೇಣಿ ಸಂಗಮದಲ್ಲೇ ಪಿಂಡ ಪ್ರದಾನ ಮಾಡುತ್ತ ಬಂದಿದ್ದಾರೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡುವಂತೆ ಒಂದೂವರೆ ವರ್ಷದಿಂದ ಜನ ಮನವಿ ಮಾಡುತ್ತಿದ್ದರು. ಈ ಕುರಿತು ಇದೀಗ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪಿಂಡ ಪ್ರದಾನಕ್ಕೆ ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ ಇಲ್ಲಿನ ಜನರು ಜಿಲ್ಲೆಯ ವಿವಿಧೆಡೆ ಎಲ್ಲೆಲ್ಲೂ ಹೋಗಿ ಪಿಂಡ ಪ್ರದಾನ ಮಾಡಿ ಬರುತ್ತಿದ್ದಾರೆ. ಮನೆಯಲ್ಲಿ ಯಾರದ್ರೂ ಹಿರಿಯರು ಸತ್ತರೆ ಪಿಂಡ ಪ್ರದಾನ ಮಾಡದೆ ಮೃತರ ಮನೆಯವರು ಮನೆಯಿಂದ ಹೊರಗೆ ಹೋಗುವಂತಿಲ್ಲ ಇದು ಕೊಡಗಿನವರ ಪರಂಪರಾಗತ ಆಚರಣೆಯಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿತ್ತು.