ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಅಳ್ನಾವರ ಪಟ್ಟಣದ ಇಂದಿರಮ್ಮನ ಕೆರೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಅಳ್ನಾವರ ತಾಲೂಕಿನ ಹುಲ್ಲಿಕೆರೆ ಗ್ರಾಮದ ಬಳಿ ಇರುವ ಈ ಕೆರೆ ಕೋಡಿ ತುಂಬಿ ಹರಿದಿದೆ. ಇದರಿಂದ ಅಳ್ನಾವರ ಪಟ್ಟಣದ ಜನರಿಗೆ ಸ್ಥಳೀಯ ಅಧಿಕಾರಿಗಳು ಅಲರ್ಟ್ ಮಾಡಿದ್ದಾರೆ. ಕೆರೆಯ ತಡೆಗೋಡೆ ಏನಾದರೂ ಒಡೆದರೆ ಜನರಿಗೆ ಬೇರೆ ಕಡೆ ಸ್ಥಳಾಂತರ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಗ್ನಿಶಾಮಕ ದಳ, ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಜನರಿಗೆ ಸ್ಥಳಾಂತರ ಮಾಡಲು ಆರು ಪರಿಹಾರ ಕೇಂದ್ರಗಳನ್ನ ಕೂಡ ಮಾಡಲಾಗಿದೆ. ಸ್ಥಳೀಯ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಇಂದ್ರಮ್ಮನ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಜನರಿಗೆ ಏನಾದರೂ ತೊಂದರೆಯಾದರೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಲು ಅಧಿಕಾರಿಗಳು ತಿಳಿಸಿದ್ದಾರೆ.