ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ಕೌನ್ಸಿಲರ್ ಬಲಿ

Public TV
3 Min Read
Rakesh Pandita

ಶ್ರೀನಗರ: ಬಿಜೆಪಿ ಪುರಸಭೆಯ ಸದಸ್ಯನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಸ್ನೇಹಿತನನ್ನು ಭೇಟಿಯಾಗಲು ಟ್ರಾಲ್ ಮುನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್ ಟ್ರಾಲ್‍ಪಯೀನ್‍ಗೆ ಬಂದಿದ್ದ ವೇಳೆ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ರಾಕೇಶ್ ಪಂಡಿತ್ ಗುಂಡಿನ ದಾಳಿಗೆ ಬಲಿಯಾದ್ದು, ಅವರ ಸ್ನೇಹಿತನ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಕೇಶ್ ಪಂಡಿತ್ ಶ್ರೀನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಅವರಿಗೆ ಇಬ್ಬರು ಭದ್ರತಾ ಪಡೆಗಳನ್ನು ಒದಗಿಸಲಾಗಿತ್ತು. ಆದರೆ ಟ್ರಾಲ್‍ಗೆ ಹೋಗುತ್ತಿದ್ದ ವೇಳೆ ಭದ್ರತಾ ಪಡೆಗಳನ್ನು ರಾಕೇಶ್ ಪಂಡಿತ್‍ರವರು ಕರೆದೊಯ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪ್ರಕರಣ ಕುರಿತಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತ ರಾಕೇಶ್ ಪಂಡಿತ್ ಅವರ ಬಲಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಾಶ್ಮೀರದ ಕಣಿವೆಯಲ್ಲಿ ರಕ್ತದೋಕುಳಿಯನ್ನುಂಟು ಮಾಡುವ ಭಯೋತ್ಪಾದಕರ ನಿರ್ಮೂಲನೆ ಮಾಡಲಾಗುವುದು. ಇದು ಮಾನವೀಯತೆ ಮತ್ತು ಕಾಶ್ಮೀರದ ಹತ್ಯೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಹೇಳಿದ್ದಾರೆ. ಇದನ್ನು ಓದಿ:  ಫೇರ್‌ವೆಲ್‌ಗೆ ಅನುಮತಿ ನೀಡಿ, ನೇಹಾಳನ್ನ ಸೀರೆಯಲ್ಲಿ ನೋಡಬೇಕು: ಪ್ರಧಾನಿಗೆ ವಿದ್ಯಾರ್ಥಿಯ ಮನವಿ

ಕೇಂದ್ರ ಸಚಿವ ಜಿತೇಂದ್ರ ಸಿಂಗ್‍ರವರು, ಪುಲ್ವಾಮಾದ ಟ್ರಾಲ್ ಮಿನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್‍ರವರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವಿಚಾರ ತೀವ್ರ ಆಘಾತವನ್ನುಂಟು ಮಾಡಿದೆ. ತಳಮಟ್ಟದ ಪ್ರಜಾಪ್ರಭುತ್ವವನ್ನು ಕಾಶ್ಮೀರ ಕಣಿವೆಯಲ್ಲಿ ನೆಲಸಮಮಾಡಲು ಬಯಸಿದವರು ಅಪಾಯಕಾರಿ ಮತ್ತು ಅಮಾನವೀಯ ಕೃತ್ಯಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *