ಚಿಕ್ಕಮಗಳೂರು: ಭದ್ರಾ ಕಾಲುವೆಗೆ ಬೊಲೆರೋ ಕಾರೊಂದು ಬಿದ್ದಿದ್ದು, ಘಟನೆಯಲ್ಲಿ ಪತಿ ಅಪಾಯದಿಂದ ಪಾರಾದ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ.
ಲಕ್ಕವಳ್ಳಿಯ ಸೋಂಪುರ ನಿವಾಸಿಗಳಾದ ಸಂತೋಷ್ ಜೈನ್ (32) ಹಾಗೂ ಅವರ ಪತ್ನಿ ಸರ್ವಮಂಗಳ (29) ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ಬೊಲೆರೋ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಚಾಲಕ ಸಂತೋಷ್ ಹೇಳುತ್ತಿದ್ದಾರೆ.
ಬೊಲೆರೋ ನೀರಿಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಗಮನಿಸಿ ಕೂಡಲೇ ಸಂತೋಷ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಪತ್ನಿ ಸರ್ವಮಂಗಳ (29)ನೀರುಪಾಲು ಆಗಿದ್ದು, ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ.
ಭದ್ರಾ ಕಾಲುವೆ 30 ಅಡಿ ಆಳ ಇದ್ದು, ಸದ್ಯ ಬೊಲೆರೋ ಕಾರು ಹಾಗೂ ಮೃತದೇಹಕ್ಕಾಗಿ ಸುಮಾರು 10-15 ನೀರು ಕಡಿಮೆ ಮಾಡಿದ್ದಾರೆ. ನೀರಿನಲ್ಲಿದ್ದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತಾದರೂ ಚೈನ್ ಕಟ್ ಆಗಿ ಕಾರು ವಾಪಸ್ ನಿರಿಗೆ ಬಿದ್ದಿದ್ದು, ಸದ್ಯ ಅದನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿತ್ತು.
ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನೆರೆದಿದ್ದು, ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ. ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.