ಶಿವಮೊಗ್ಗ: ಭದ್ರಾವತಿಯಲ್ಲಿ ಕುತಂತ್ರ ರಾಜಕಾರಣ ಮಾಡಲಾಗುತ್ತಿದ್ದು, ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಸಂಗಮೇಶ್ ಗುಡುಗಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಮುಗಿಸಬೇಕೆಂದು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕಾರ್ಯಕರ್ತರು ಮತ್ತು ನನ್ನ ಮಗನನ್ನು ಜೈಲಿಗೆ ಕಳಿಸಿದ್ದಾರೆ. ಭದ್ರಾವತಿಯಲ್ಲಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ನಾವು ಭದ್ರಾವತಿ ಕಬ್ಬಿಣದ ರೀತಿಯಲ್ಲಿ ಗಟ್ಟಿಯಾಗಿದ್ದೇವೆ. ಭದ್ರಾವತಿಯ ಜನ ನಮ್ಮ ಕಡೆ ಇದ್ದಾರೆ ಎಂದು ತಿರುಗೇಟು ನೀಡಿದರು.
ಧರ್ಮದ ಹೆಸರು ಹೇಳಿಕೊಂಡು, ಜನರಿಗೆ ಮಂಕು ಬೂದಿ ಎರಚಲು ಬಿಜೆಪಿಯವರು ಹೊರಟಿದ್ದಾರೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಲು ಹೊರಟಿದ್ದಾರೆ. ಇವೆಲ್ಲ ಭದ್ರಾವತಿಯಲ್ಲಿ ನಡೆಯುವುದಿಲ್ಲ ಎಂದರು.
ವಿಐಎಸ್‍ಎಲ್ ಮತ್ತು ಎಂಪಿಎಂ ಕಾರ್ಖಾನೆ ಮುಚ್ಚಲು ಬಿಜೆಪಿಗರು ಹೊರಟಿದ್ದಾರೆ. ತೀರ್ಥಹಳ್ಳಿ ಶಾಸಕ ಕಿಡಿಗೇಡಿ ಆರಗ ಜ್ಞಾನೇಂದ್ರ ನೂರಾರು ಕೋಟಿ ರೂ. ನಷ್ಟವುಂಟು ಮಾಡಿದ ವಿಐಎಸ್‍ಎಲ್ ಕಾರ್ಖಾನೆ ಆರಂಭಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಮಾಡುತ್ತೇವೆ ಎಂದರು ಅದು ಆಗಿಲ್ಲ. ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರದ್ದೇ ಆಟ. ಕತ್ತೆಗೆ ಎಂಟು ಕಾಲು ಎಂದರೆ, ಹೌದು ಸ್ವಾಮಿ ಎನ್ನಬೇಕು ಇವರು ಆಡಿದ್ದೆ ಆಟವಾಗಿ ಬಿಟ್ಟಿದೆ ಎಂದು ಕಿಡಿಕಾರಿದರು.