ಉಡುಪಿ: ಜಿಲ್ಲೆಯ ಬೈಂದೂರು ಪೊಲೀಸರು ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ಐವರು ಆರೋಪಿಗಳ ಸಹಿತ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಬ್ರಹ್ಮಾವರದ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ, ಕೇರಳ ತಿರುವನಂತಪುರಂ ನಿವಾಸಿ ಯದುನಾರಾಯಣ, ಬೈಂದೂರು ಬಿಜೂರು ನಿವಾಸಿ ಗುರುರಾಜ್ ಪೂಜಾರಿ, ಉಪ್ಪುಂದ ನಿವಾಸಿ ಸುನೀಲ್ ಪೂಜಾರಿ, ಮತ್ತು ಬಿಜೂರು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯ್ಕ್ ಅವರಿಗೆ ದೊರಕಿದ ಅಧಿಕೃತ ಮಾಹಿತಿ ಆಧರಿಸಿ ಉಪ್ಪುಂದದ ಪ್ರಸಿದ್ಧ ಲಾಡ್ಜ್ ಮೇಲೆ ದಾಳಿ ನಡೆಸಲಾಗಿತ್ತು.
ದಾಳಿ ಸಂದರ್ಭ ಲಾಡ್ಜಿನ ರೂಮಿನೊಳಗೆ ಗಾಂಜಾ ಸೇವಿಸುತ್ತಿದ್ದುದು ಪತ್ತೆಯಾಗಿದೆ. ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ದುಬಾರಿ ಗಾಂಜಾ ಪತ್ತೆಯಾಗಿದೆ. ಆರೋಪಿಗಳಿಂದ 6 ಮೊಬೈಲ್ ಫೋನ್‍ಗಳು, 3 ದ್ವಿಚಕ್ರ ವಾಹನಗಳು ಸೇರಿದಂತೆ 1,71,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆ ವೇಳೆ ಆರೋಪಿಗಳಿಗೆ ಭಟ್ಕಳ ಮೂಲದ ಶಬ್ಬೀರ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಬ್ಯಾಗಿನಲ್ಲಿ ಗಾಂಜಾ ಸೇವಿಸಲು ಬಳಸುವ ಒಸಿಬಿ ಸ್ಲಿಮ್ ಪ್ರೀಮಿಯಂ ಎನ್ನುವ ಕಾಗದದ ಚೂರುಗಳು ಪತ್ತೆಯಾಗಿವೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.