-ಸಂಸದರ ಪುತ್ರನ ಬ್ಲಾಕ್‍ಮೇಲ್ ಆಡಿಯೋ ಔಟ್
-ವರ್ಗಾವಣೆ ಮಾಡದೇ ಇರಲು ಲಕ್ಷ ಲಕ್ಷ ಬೇಡಿಕೆಯ ಆರೋಪ
ಕೊಪ್ಪಳ: ಕೊರೊನಾ ಮಹಾಮಾರಿಯಿಂದ ಸಾಕಷ್ಟು ಬಡ ಕುಟುಂಬಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತವರ ಸಹಾಯಕ್ಕಾಗಿ ಸಾಕಷ್ಟು ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಪ್ರೇರಿತರಾಗಿ ಮುಂದೆ ಬಂದು ತಮ್ಮ ತಮ್ಮ ಸ್ವಂತ ಖರ್ಚಿನಲ್ಲಿ ಸಹಾಯ ಮಾಡಿ ಬಡವರ ಮತ್ತು ನಿರ್ಗತಿಕರಿಗೆ ಹಸಿವು ನೀಗಿಸಿದ್ದಾರೆ. ಆದರೆ ಕೊಪ್ಪಳ ಸಂಸದರ ಪುತ್ರ ಬಡವರಿಗೆ ಸಹಾಯದ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ, ಅವರಿಂದ ತೆಗೆದುಕೊಂಡ ಸಾಮಗ್ರಿಗಳನ್ನ ಬಡವರಿಗೆ ಹಂಚಿ ಪೋಸ್ ಗಿಟ್ಟಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
Advertisement
ಕೊಪ್ಪಳ ಸಂಸದ ಕರಡಿ ಸಂಗಣ್ಣರವರ ಪುತ್ರ ಅಮರೇಶ್ ಕರಡಿ ಫೋಟೋಗೆ ಪೋಸ್ ಕೊಟ್ಟ ಲೀಡರ್. ರಾಜ್ಯದಲ್ಲಿ ಯಾವಾಗ ಬಿಜೆಪಿ ಸರ್ಕಾರ ಬಂತೋ ಅಂದಿನಿಂದ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಪ್ರಭಾವ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಮರೇಶ್ ಕರಡಿ ತಾವೇ ಜಿಲ್ಲಾ ಉಸ್ತುವಾರಿ ಮಂತ್ರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
Advertisement
Advertisement
ಲಾಕ್‍ಡೌನ್ ವೇಳೆ ಬಡವರಿಗೆ ನೀಡಿದ ಅಹಾರದ ಕಿಟ್ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ಮಾಡಿದ್ದಾರೆ. ಬಡವರಿಗೆ ನೀಡಿದ ದಿನಸಿ ಕಿಟ್ ವಿತರಣೆ ಮಾಡಿದ್ದು, ಜಿಲ್ಲೆಯ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ ವಸೂಲಿ ಮಾಡಿ ತಮ್ಮ ಫೋಟೋ ಅಂಟಿಸಿಕೊಂಡು ಫೋಸ್ ನೀಡಿದ್ದಾರೆ ಎಂಬ ಆರೋಪಕ್ಕೆ ಪೂರಕ ಎಂಬಂತೆ ಅಮರೇಶ್ ಕರಡಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಲಾಕ್‍ಡೌನ್ ಇದೆ. ನಿಮ್ಮಿಂದ ಟನ್ ಗಟ್ಟಲೆ ಅಕ್ಕಿ ಪೂರೈಸಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೊಪ್ಪಳ ಡಿವೈಎಸ್ಪಿ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಣ ಮತ್ತು ಸಾಮಗ್ರಿಗಳನ್ನು ನೀಡಿದ್ದಾರೆ. ನೀವು ಕೂಡ ನೀಡಬೇಕು ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.
50 ಟನ್ ಅಕ್ಕಿಯ ಹಣವನ್ನು ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರು ಅಮರೇಶ್ ಕರಡಿಗೆ ನೀಡಿದ್ದಾರೆ. ನಂತರ ಡಿವೈಎಸ್ಪಿಯಾಗಿ ಗಂಗಾವತಿಯಲ್ಲಿ ಮುಂದುವರಿಯಬೇಕು ಅಂದ್ರೆ ಹಣ ನೀಡಬೇಕು ಎನ್ನುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಡಿವೈಎಸ್ಪಿ ಗಳ ಮಾಡಿದ ವರ್ಗಾವಣೆ ಯಲ್ಲಿ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಹೆಸರು ಪ್ರಕಟಗೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ ಎಂಬ ಮಾತು ಈಗ ಪೊಲೀಸ್ ವಲಯದಿಂದ ಕೇಳಿಬಂದಿದೆ.
ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ ಕೂಡ ಅವಧಿ ಒಂದು ವರ್ಷ ಮುಗಿದಿದೆ. ಆದರೆ ಕೊಪ್ಪಳ ಸಂಸದರ ಪುತ್ರನ ಜೊತೆ ಉತ್ತಮ ಸಂಬಂಧ ಇರುವ ಕಾರಣಕ್ಕೆ ಅವರು ಕೊಪ್ಪಳ ಡಿವೈಎಸ್ಪಿಯಾಗಿ ಮುಂದುವರಿದಿದ್ದಾರೆ ಎಂದು ಜಿಲ್ಲೆಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ವರ್ಗಾವಣೆ ತಡೆಯಲು ಅಮರೇಶ್ ಕರಡಿ ಡಿವೈಎಸ್ಪಿ ಚಂದ್ರಶೇಖರ್ ಬಳಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.
ಈಗ ಗಂಗಾವತಿ ಡಿವೈಎಸ್ಪಿ ವರ್ಗಾವಣೆ ಗೊಂಡಿದ್ದು, ಅವರೊಂದಿಗೆ ಲಾಕ್‍ಡೌನ್ ಅವಧಿಯಲ್ಲಿ ಅಕ್ಕಿ ಪೂರೈಸುವಂತೆ ಪೀಡಿಸಿದ ಆಡಿಯೋ ರಿವೀಲ್ ಆಗಿದ್ದು, ಎಲ್ಲರನ್ನ ಅನುಮಾನ ಮೂಡಿಸುವಂತೆ ಮಾಡಿದೆ. ಡಿವೈಎಸ್ಪಿ ಈಗಾಗಲೇ ಒಂದು ವರ್ಷ ಗಂಗಾವತಿಯಲ್ಲಿ ಮುಗಿಸಿದ್ದಾರೆ. ಸರ್ಕಾರ ಆದೇಶ ಒಂದು ವರ್ಷದ ನಂತರ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲಿಯೇ ಮುಂದುವರಿಯಬೇಕು ಅಂದರೆ ಜನಪ್ರತಿನಿಧಿಗಳ ಮಾತು ಕೇಳಲೇಬೇಕು. ಇಲ್ಲ ಅಂದ್ರೆ ಅವರ ತಮಗೆ ಯಾರು ಅನುಕೂಲ ಆಗುತ್ತಾರೆ ಅವರನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಪ್ಪಳ ಸಂಸದನ ಪುತ್ರನ ದರ್ಬಾರ್ ಜಾಸ್ತಿಯಾಗಿದೆ ಎನ್ನುವ ಮಾತುಗಳು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.