ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2020ರ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಮೂಲಕ ಬರೋಬ್ಬರಿ 1735 ಕೋಟಿ ರೂ. ಬ್ರ್ಯಾಂಡ್ ಮೌಲ್ಯದ ಒಡೆಯನಾಗಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಕಳೆದ ನಾಲ್ಕುವರ್ಷಗಳಿಂದ ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂಬರ್ ಸ್ಥಾನದಲ್ಲಿರುವ ಕೊಹ್ಲಿ ಆಫ್ ದಿ ಫೀಲ್ಡ್ ನಲ್ಲೂ ಕಿಂಗ್ ಆಗಿ ಮೆರೆದಾಡುತ್ತಿದ್ದಾರೆ.
ಕೊಹ್ಲಿ ಜೊತೆ ಭಾರತ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ 866 ಕೋಟಿ ಮತ್ತು ರಣವೀರ್ ಸಿಂಗ್ 750 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಸಂಪಾದಿಸಿಕೊಂಡು ಭಾರತದ ಶ್ರೀಮಂತ ಸೆಲೆಬ್ರಿಟಿಗಳಾಗಿ ಕಾಣಿಸಿಕೊಂಡಿದ್ದಾರೆ.
ಕೊರೊನಾದಿಂದಾಗಿ ಎಲ್ಲಾ ಸೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯ ಕುಸಿತ ಕಂಡರೆ, ಕೊಹ್ಲಿಯ ಬ್ರ್ಯಾಂಡ್ ಮೌಲ್ಯದಲ್ಲಿ ಯಾವುದೇ ರೀತಿಯ ದೊಡ್ಡ ಬದಲಾವಣೆಗಳಾಗದೆ ಹಾಗೆ ಉಳಿದುಕೊಂಡಿದೆ ಎಂದು ಬ್ರ್ಯಾಂಡ್ ಮೌಲ್ಯಮಾಪನ ಮಾಡಿರುವ ಡಫ್ ಮತ್ತು ಪೆಲ್ಪ್ಸ್ ಸಂಸ್ಥೆ ತಿಳಿಸಿದೆ. ಕೊಹ್ಲಿ 30 ಕ್ಕಿಂತಲೂ ಅಧಿಕ ಬ್ರ್ಯಾಂಡ್ ಕಂಪನಿಗಳ ಜೊತೆ ಕಾಣಿಸಿಕೊಂಡು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.
ಶ್ರೀಮಂತ ಪಟ್ಟಿಯಲ್ಲಿರುವ ಹತ್ತು ಪ್ರಮುಖ ಸೆಲೆಬ್ರಿಟಿಗಳ ಲೀಸ್ಟ್‍ನಲ್ಲಿ ಕೊಹ್ಲಿ ಒಬ್ಬರೆ ಕ್ರೀಡಾ ಕ್ಷೇತ್ರದ ಪ್ರತಿನಿಧಿಯಾಗಿದ್ದು ಇನ್ನುಳಿದ ಎಲ್ಲ ಸ್ಥಾನಗಳು ಚಲನಚಿತ್ರದ ತಾರೆಯರ ಪಾಲಾಗಿದೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 36 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ 11 ನೇ ಸ್ಥಾನ ಪಡೆದುಕೊಂಡಿದ್ದಾರೆ.