ಇಸ್ಲಾಮಾಬಾದ್: ಲಾಕ್ಡೌನ್ ಕಾರಣದಿಂದ ಮನೆಯಲ್ಲೇ ಕುಳಿತು ವೆಬ್ ಸೀರಿಸ್ ನೋಡುವುದರಲ್ಲಿ ಬ್ಯುಸಿಯಾಗಿರುವ ಪಾಕ್ ಕ್ರಿಕೆಟಿಗ ಮೊಹಮ್ಮದ್ ಆಮಿರ್, ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ.
ಪಾಕಿಸ್ತಾನ ವೇಗಿ ಮೊಹಮ್ಮದ್ ಆಮಿರ್ ತಮ್ಮ ಕುಟುಂಬದೊಂದಿಗೆ ಸೇಲ್ಫ್ ಐಸೋಲೇಷನ್ನಲ್ಲಿದ್ದಾರೆ. ಮನೆಯಲ್ಲೇ ಉಳಿದಿರುವ ಆಮಿರ್ ಸಿನಿಮಾ, ವೆಬ್ ಸೀರಿಸ್ ಸೇರಿದಂತೆ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದರೆ ಈ ವೇಳೆ ಅಚ್ಚರಿಯ ಅಂಶವೊಂದನ್ನು ಆಮಿರ್ ಗಮನಿಸಿದ್ದು, ಟರ್ಕಿಷ್ ಟಿವಿ ಧಾರಾವಾಹಿವೊಂದರಲ್ಲಿ ನಟಿಸಿದ್ದ ನಟರೊಬ್ಬರು ಕೊಹ್ಲಿರಂತೆಯೇ ಇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಲ್ಲದೇ ನಟನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
@imVkohli brother is it you m confused ???? pic.twitter.com/kbwn31yjT6
— Mohammad Amir (@iamamirofficial) May 15, 2020
ಟ್ವೀಟ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ಯಾಗ್ ಮಾಡಿರುವ ಆಮಿರ್, ‘ಬ್ರದರ್ ಇದು ನೀವೇನಾ?’ ಗೊಂದಲ ಎದುರಾಗಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಆಮಿರ್ ಅವರ ಈ ಟ್ವೀಟ್ಗೆ ಇದುವರೆಗೂ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದಕ್ಕೂ ಮುನ್ನ ರನ್ ಮೆಷಿನ್ ಕೊಹ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಆಮಿರ್, ಪಾಕ್ ಕ್ರಿಕೆಟ್ನಲ್ಲಿ ನನ್ನ ನೆಚ್ಚಿನ ಆಟಗಾರ ಸಯೀದ್ ಬಾಯ್! ಆದರೆ ನೀವು ಈ ಯುಗದ ಬಗ್ಗೆ ಪ್ರಶ್ನೆ ಮಾಡಿದರೆ ಅದು ವಿರಾಟ್ ಕೊಹ್ಲಿ. ಈ ಯುಗದಲ್ಲಿ ಅವರಿಗೆ ಸಮ ಎನಿಸುವ ಆಟಗಾರ ಮತ್ತೊಬ್ಬರಿಲ್ಲ ಎಂದು ಆಮಿರ್ ಮಾಧ್ಯಮ ಸಂವಾದವೊಂದರಲ್ಲಿ ಹೇಳಿದ್ದರು.