– ರಾಜಕಾರಣಿಗಳು ಸೇರಿ ಹಲವರಿಗೆ ಕೋಟ್ಯಂತರ ರೂ. ಮೋಸ
ಮುಂಬೈ: ತಾಯಿ, ಮಗಳು ಸೇರಿ ಬ್ಯುಸಿನೆಸ್ ಮ್ಯಾನ್ ಗೆ ಬರೋಬ್ಬರು 1.3 ಕೋಟಿ ರೂ. ಪಂಗನಾಮ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಆರೋಪಿಗಳನ್ನು 52 ವರ್ಷದ ರಾಗಿಣಿ ಖಂಡೇಲ್ವಾಲ್ ಹಾಗೂ ಆಕೆಯ 22 ವರ್ಷದ ಮಗಳು ಮಾನಸಿ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದು, ತಾಯಿ ಮಗಳು ಸೇರಿ ಅಂಧೇರಿಯ ಬ್ಯುಸಿನೆಸ್ ಮ್ಯಾನ್‍ಗೆ ಬರೋಬ್ಬರಿ 1.3 ಕೋಟಿ ರೂ. ವಂಚಿಸಿದ್ದಾರೆ. ಬ್ಯುಸಿನೆಸ್ ಮ್ಯಾನ್ ಸುಶಾಂತ್ ಶೆಲತ್ಕರ್ ಅವರು ಟಗ್ ಬೋಟ್ ಹಾಗೂ ಬಾರ್ಜ್ ಹಡಗು ಕೊಳ್ಳಲು ಹಣ ನೀಡಿದ್ದರು. ಕೊರೊನಾ ಸಮಯದಲ್ಲಿ ಜೂನ್ 2020ರಲ್ಲಿ ಈ ಡೀಲ್ ನಡೆದಿತ್ತು.
ಹಣ ಪಡೆದು ವಂಚನೆ ಮಾಡಿರುವ ಕುರಿತು ಸುಶಾಂತ್ ಅವರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ರಾಜಕಾರಣಿಗಳು ಸೇರಿದಂತೆ ಹಲವರಿಗೆ ಇದೇ ರೀತಿ ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬ್ಯುಸಿನೆಸ್ ಮ್ಯಾನ್ ಪತ್ನಿ ಪದ್ಮಾ ಶೆಲಾತ್ಕರ್ ಒಂದೇ ಹಡಗನ್ನು ಹಲವರಿಗೆ ತೋರಿಸಿ ಇದೇ ರೀತಿ 14 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಗ್ ಬೋಟ್ ಹಾಗೂ ಬಾರ್ಜ್ ಉತ್ಪಾದಕರ ಕುರಿತು ವಿವರ ಪಡೆಯಲು ಜೂನ್ 2018ರಲ್ಲಿ ವೆಬ್ಸೈಟ್ ಒಂದರಲ್ಲಿ ಮಾಹಿತಿ ಪಡೆದಿದ್ದೆ. ವೆಬ್‍ಸೈಟ್‍ಗೆ ಭೇಟಿ ನೀಡಿದ 2 ದಿನದ ಬಳಿಕ ಅಮಿರ್ ಖಾನ್ ಎಂಬುವರಿಂದ ಕರೆ ಬಂತು. ರಾಗಿಣಿ ಖಂಡೇಲ್ವಾಲ್ ಹಡಗು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಪರಿಚಿತ ವ್ಯಕ್ತಿ ಹೇಳಿದ ಎಂದು ಸುಶಾಂತ್ ವಿವರಿಸಿದ್ದಾರೆ.
ಅಕ್ಟೋಬರ್ 2020ರಂದು ಆರೋಪಿಗಳು ಸುಶಾಂತ್ ಅವರನ್ನು ಸಭೆಗೆ ಕರೆದಿದ್ದು, ನಾವು ಶ್ರೀ ತಿರುಪತಿ ಬಾಲಾಜಿ ಕಂಪನಿಯ ನಿರ್ದೇಶಕರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಕಲ್ಯಾಣದ ಘಣೇಶ್ ಘಾಟ್‍ನಲ್ಲಿ ಶಿಪ್‍ಯಾರ್ಡ್ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಬಳಿಕ ತಾಯಿ ಮಗಳು ಇಬ್ಬರೂ ಸೇರಿ ಸುಶಾಂತ್ ಅವರಿಗೆ ಒಂದು ಹಡಗು ತೋರಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಡಗು ತಯಾರಿಸುವಲ್ಲಿ ನಾವು ಎಕ್ಸ್‍ಪರ್ಟ್ ಎಂದು ಹೇಳಿದ್ದಾರೆ. ಇದಾದ ಬಳಿಕ ಬ್ಯುಸಿನೆಸ್ ಮ್ಯಾನ್ ಹಣವನ್ನು ವಗಾಯಿಸಿದ್ದು, ಬಳಿಕ ಸುಶಾಂತ್ ಅವರಿಗೆ ತಾವು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಈ ತಾಯಿ, ಮಗಳು ರವಿ ಜೈಸಿಂಗ್ ಎಂಬುವರಿಗೂ 2018ರಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಗಳ ಬಳಿಕ ಇಬ್ಬರೂ ಸಂತ್ರಸ್ತರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.