– ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ
ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮತ ಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರತಿಷ್ಠೆಯ ಕಣವಾಗಿರೋ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಹಾಗೂ ಜೆಡಿಎಸ್‍ನ ಕೃಷ್ಣಮೂರ್ತಿ ಭವಿಷ್ಯ ನಾಳೆ ಪ್ರಕಟವಾಗಲಿದೆ.
Advertisement
ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.
Advertisement
Advertisement
ಆರ್.ಆರ್.ನಗರದಲ್ಲಿ 25 ಸುತ್ತು ಮತ ಎಣಿಕೆ: ಆರ್.ಆರ್.ನಗರ ಮಿನಿ ಕದನದಲ್ಲಿ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಕಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ 412 ಅಂಚೆ ಹಾಗೂ 04 ಇಟಿಪಿಬಿಎಸ್ ಸೇರಿದಂತೆ 2,09,828 ಮತ ಚಲಾವಣೆ ಆಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನ ಎಣಿಕೆ ಹಾಕಲಾಗುವುದು. ಇವಿಎಂ ಮತ ಎಣಿಕೆ ಬೆಳಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತು ಮತ ಎಣಿಕೆ ಇರಲಿದೆ.
Advertisement
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಪ್ರತಿ ಸುತ್ತಿನಲ್ಲಿ 28 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಸಹಾಯಕ ಚುನಾವಣೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, 2 ಹಂತದ ತರಬೇತಿ ನೀಡಲಾಗಿದೆ. ಚುನಾವಣೆ ಸಿಬ್ಬಂದಿಗೆ ನಾಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಸಿಬ್ಬಂದಿ ಸೇರಿದಂತೆ ಎಣಿಕೆ ಕೇಂದ್ರದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಸರ್ಪಗಾವಲು: ಮತ ಎಣಿಕೆ ಕಾರ್ಯ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಸುಮಾರು 1,800 ಪೊಲೀಸರ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧವಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3 ಜನ ಡಿಸಿಪಿ, ಎಸಿಪಿ ಸೇರಿ 900 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 36 ಕೆ.ಎಸ್.ಆರ್.ಪಿ/ಸಿ.ಎ.ಆರ್ ಫೋರ್ಸ್, ಒಂದು ಅಗ್ನಿಶಾಮಕ ದಳ, ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಕೋವಿಡ್ ಇರುವ ಕಾರಣ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಮತ ಕೇಂದ್ರದ ಬಳಿ ಸಂಭ್ರಮಾಚರಣೆ, ಪಟಾಕಿ ಹಚ್ಚುವ ಹಾಗಿಲ್ಲ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಹೈವೋಲ್ಟೇಜ್ ಮತ ಎಣಿಕೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಒಳಗೆ ವಿಜಯಲಕ್ಷ್ಮಿ ಯಾರಿಗೆ ಅನ್ನೋದು ತಿಳಿಯಲಿದ್ದು, ಶಾಂತಿಯುತ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.