ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬೈಕ್ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗಿನ ವಿರಾಜಪೇಟೆಯ ಪಂಜರುಪೇಟೆಯಲ್ಲಿ ನಡೆದಿದೆ. ಸದ್ಯ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರಿಗೂ ಬಲವಾಗಿ ಪೆಟ್ಟಾಗಿದ್ದು, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಪ್ರಥಮ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆ ಹೋಗುತ್ತಿದ್ದ ಸ್ಕೂಟರ್ ಹಾಗೂ ಬೈಕ್‍ಗೆ, ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಕಾರು, ಪಟ್ಟಣದ ಪಂಜಾರುಪೇಟೆಯಲ್ಲಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಕೂಟರ್ ಚಾಲಕ ಪೊನ್ನಂಪೇಟೆ ವಕೀಲ ಪಿ.ಕೆ.ರವಿಂದ್ರ ಅವರ ಎಡಗಾಲಿಗೆ ಬಲವಾದ ಪೆಟ್ಟಾಗಿದೆ.
ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀಪದ ಕಿರುಮಕ್ಕಿಯ ನಿವಾಸಿಯಾದ ಬೈಕ್ ಸವಾರ ಅಶ್ವಿನ್ ಕುಮಾರ್ ಗೆ ಕಾಲು ಮತ್ತು ತಲೆ ಭಾಗಕ್ಕೆ ಪೆಟ್ಟಾಗಿದ್ದು ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿದ ವಿರಾಜಪೇಟೆ ನಗರ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರನ್ನು ವಶಪಡಿಸಿಕೊಂಡು ಕಾರು ಚಾಲಕ ಎಸ್.ವಿನೋದ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿರುವುದಾಗಿ ನಗರ ಠಾಣಾಧಿಕಾರಿ ಜಗದೀಶ್ ದೂಳ್‍ಶೆಟ್ಟಿ ತಿಳಿಸಿದ್ದಾರೆ.