ಉಡುಪಿ: ಜಿಲ್ಲೆ ಕಾಪು ತಾಲೂಕಿನ ಉದ್ಯಾವರ ಬೊಳ್ಜೆ ರೈಲ್ವೆ ಟ್ರ್ಯಾಕ್ ಮೇಲೆ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಉಬೇದುಲ್ಲ ಎಂದು ಗುರುತಿಸಲಾಗಿದೆ.
ಉಬೇದುಲ್ಲ ಕಾಪು ತಾಲೂಕು ಮಲ್ಲಾರು ಗ್ರಾಮದ ನಿವಾಸಿ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಉದ್ಯಾವರ ಬಳಜಿ ರೈಲ್ವೆ ಟ್ರ್ಯಾಕ್ ನಲ್ಲಿ ಬಂದಿದ್ದು, ಅಮಲಿನಲ್ಲಿದ್ದರು ಎನ್ನಲಾಗಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.
ಸ್ಥಳೀಯ ನಿವಾಸಿಯೊಬ್ಬರು ಘಟನೆ ಕುರಿತು ಮಾಹಿತಿ ನೀಡಿದ್ದು, ಕಳೆದ ರಾತ್ರಿ 9 ಗಂಟೆಗೆ ಮೃತ ವ್ಯಕ್ತಿ ಬಂದಿದ್ದರು. ಅಮಲಿನಲ್ಲಿ ತೂರಾಡುತ್ತಾ ಹೋಗಿದ್ದು ನೋಡಿದ್ದೇನೆ. ಬೈಕ್ ಇಲ್ಲೇ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಹೋಗಿದ್ದರು. ಬೆಳಗ್ಗೆ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಶವದ ಗುರುತು ಪತ್ತೆ ಮಾಡಿ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಪು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.