ಚಿಕ್ಕಮಗಳೂರು: ಬೈಕ್ ಸವಾರ ಬೈಕ್ ಬಿಟ್ಟು ಕಾರನ್ನ ಕಂಟ್ರೋಲ್‍ಗೆ ತೆಗೆದುಕೊಂಡ ಪರಿಣಾಮ ಸಂಭವಿಸಬಹುದಾದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ ಮೂಡಿಗೆರೆ ನಗರದಲ್ಲಿ ನಡೆದಿದೆ.
ಮಾರುತಿ 800 ಕಾರಿನಲ್ಲಿ ಬಂದ ವ್ಯಕ್ತಿ, ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾನೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಯುವತಿ ಕೂತಿದ್ದಳು. ಆದರೆ ಯುವತಿ ಕೂಡ ಕಾರಿನಿಂದ ಕೆಳಗಿಳಿದಿದ್ದಾಳೆ. ಯುವತಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಿಂತಿದ್ದ ಕಾರು ಚಾಲಕನಿಲ್ಲದೇ ತಾನಾಗೇ ಚಲಿಸಲು ಆರಂಭಿಸಿದೆ. ಅಕ್ಕಪಕ್ಕದಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಗಿದೆ. ಎಲ್ಲರೂ ಕಾರು ತಾನಾಗೇ ಹೋಗುತ್ತಿದೆ ಎಂದು ಗಾಬರಿಗೊಳಗಾಗಿ ಅಕ್ಕಪಕ್ಕ ಸರಿಯುತ್ತಿದ್ದರು.
ಅದೇ ವೇಳೆಗೆ ಕಾರಿನ ಹಿಂಭಾಗದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟಿ ಸವಾರ ಕಾರು ತಾನಾಗೇ ಹೋಗುವುದನ್ನ ಗಮನಿಸಿ ಓಡಿ ಬಂದು ಕಾರ್ ಡೋರ್ ತೆಗೆದು ಡ್ರೈವರ್ ಸೀಟಲ್ಲಿ ಕೂತು ಕಾರಿನ ಬ್ರೇಕ್ ಹಿಡಿದು ಕಂಟ್ರೋಲ್ ಮಾಡಿದ್ದಾನೆ. ಅದೇ ರಸ್ತೆಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಜನಜಂಗುಳಿ ಹಾಗೂ ಜನರ ಓಡಾಟ ಹೆಚ್ಚಿತ್ತು. ಕಾರು ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದ್ದು, ಬೈಕ್ ಸವಾರ ಕಾರನ್ನ ಕಂಟ್ರೋಲ್‍ಗೆ ತೆಗೆದುಕೊಂಡು ಸಮಯ ಪ್ರಜ್ಞೆ ಮೆರೆದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ.
ಬೈಕಿನಲ್ಲಿ ಬರುವಾಗ ಕಾರಿನ ಚಾಲಕ ಇಳಿದು ಹೋಗಿದ್ದನ್ನ ಗಮನಿಸಿದ್ದ ಬೈಕ್ ಸವಾರ, ಅದೇ ಕಾರಿನ ಹಿಂದೆ ಬೈಕ್ ಪಾರ್ಕ್ ಮಾಡಿದ್ದನು. ಆತ ಬೈಕ್ ಪಾರ್ಕ್ ಮಾಡುತ್ತಿದ್ದಂತೆ ಕಾರು ಮೂವ್ ಆಗೋದನ್ನ ಕಂಡು ಓಡಿ ಬಂದು ಕಂಟ್ರೋಲ್ ಮಾಡಿದ್ದಾನೆ. ಬೈಕ್ ಸವಾರನ ಈ ಸಮಯಪ್ರಜ್ಞೆಗೆ ಸ್ಥಳೀಯರು ಶ್ಲಾಘಿಸಿದ್ದಾರೆ.