– ಗೃಹ ಸಚಿವರ ತವರಲ್ಲೇ ಘಟನೆ
ಹುಬ್ಬಳ್ಳಿ: ಗೃಹ ಸಚಿವರ ತವರಿನಲ್ಲಿಯೇ ಕ್ರೈಂಗಳಿಗೆ ಕಡಿವಾಣ ಇಲ್ಲದಂತಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಇರಲು ಕೂಡ ಆತಂಕಪಡುವ ಸ್ಥಿತಿ ಎದುರಾಗಿದೆ.
ಮನೆಯೊಂದಕ್ಕೆ 10 ಮಂದಿ ಪುಂಡರ ತಂಡ ದಾಳಿ ನಡೆಸಿ ಬೈಕಿಗೆ ಬೆಂಕಿ ಹಚ್ಚಿದೆ. ಅಲ್ಲದೆ ಮನೆಯಲ್ಲಿನ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆ ಹುಬ್ಬಳ್ಳಿ ಗೋಕುಲ ರಸ್ತೆಯ ಗಿರಿ ನಗರದಲ್ಲಿ ನಡೆದಿದೆ.
ವಿನಯ ದೇಸಾಯಿ ಅವರಿಗೆ ಸೇರಿದ ಮನೆಯಾಗಿದ್ದು, ಮೋಟಾರ್ ಕಳ್ಳತನಕ್ಕೆ ಬಂದವರಿಂದ ದಾಂಧಲೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಕಳವು ಮಾಡುತ್ತಿರುವ ಶಬ್ದ ಕೇಳಿ ಹೊರಬಂದ ವಿನಯ್ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಮನೆಯ ಹೆಣ್ಣು ಮಕ್ಕಳ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ.
ಪುಂಡರ ಹಾವಳಿಯಿಂದ ವಿನಯ ಹಾಗೂ ಅವರ ಅಕ್ಕನಿಗೆ ಗಂಭೀರ ಗಾಯವಾಗಿದ್ದು,ವಿನಯ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.