– ಚಾಲಕನಿಗೆ ಸ್ಥಳೀಯರಿಂದ ಥಳಿತ
ಮಂಡ್ಯ: ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳೀಯರು ಚಾಲಕನ್ನು ಹಿಡಿದು ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಾಧುಗೋನಹಳ್ಳಿ ಗ್ರಾಮದ ಬಳಿ ಜರುಗಿದೆ.
ಹೆಗ್ಗಡಹಳ್ಳಿ ಗ್ರಾಮದ ಮನು (32) ಮೃತ ಯುವಕ. ಮನು ಬೈಕ್ ನಲ್ಲಿ ಕೆ.ಆರ್.ಪೇಟೆಗೆ ದಿನಸಿ ತರಲು ತೆರಳಿದ್ದನು. ದಿನಸಿ ತೆಗೆದುಕೊಂಡು ವಾಪಸ್ಸು ಊರಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಗೂಡ್ಸ್ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‍ನಿಂದ ಕೆಳಗೆ ಬಿದ್ದ ಮನುವಿನ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂದರ್ಭದಲ್ಲಿ ಸ್ಥಳೀಯರು ಚಾಲಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಗೂಡ್ಸ್ ವಾಹನದ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.