ಹಾಸನ: ದಿನದಿಂದ ದಿನಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುತ್ತಾ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳು ಇಂದು ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೇಲೂರು ಸಮೀಪವೇ ಬೀಡು ಬಿಟ್ಟಿದ್ದು ಆತಂಕ ಸೃಷ್ಟಿಸಿವೆ.
ಬೇಲೂರು ಪಟ್ಟಣಕ್ಕೆ ಎಂಟ್ರಿ ಕೊಟ್ಟಿರುವ ಗಜ ಪಡೆ, ಬೇಲೂರು ಸಮೀಪ ಜೋಳದ ಹೊಲದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದೆ. ಆ ಭಾಗದಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದ್ದು, ರೈತರ ಗೋಳು ಹೇಳ ತೀರದಾಗಿದೆ. ಕಾಫಿ ತೋಟಗಳಿರುವ ಮಲೆನಾಡು ಭಾಗದಲ್ಲಿ ಹೆಚ್ಚು ಬೀಡು ಬಿಡುತಿದ್ದ ಆನೆಗಳು ಪಟ್ಟಣದ ಸಮೀಪ ಲಗ್ಗೆ ಇಟ್ಟಿದ್ದರಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಪಟ್ಟಣದ ಸಮೀಪ ಚನ್ನಕೇಶವ ನಗರದಲ್ಲಿ ಆರು ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆಗಳನ್ನು ಕಂಡು ಜನತೆ ಭಯಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಧ್ವನಿವರ್ಧಕ ದ ಮೂಲಕ ಜನರಿಗೆ ಎಚ್ಚರಿಕೆ ನೀಡುತಿದ್ದು, ಸಮೀಪದ ಮನೆಗಳಿಂದ ಯಾರು ಹೊರ ಬಾರದಂತೆ ತಿಳಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತವೆ.