– ಸಿದ್ದರಾಮಯ್ಯ, ಡಿಕೆಶಿ ಒಟ್ಟಿಗಿಲ್ಲ
ಹಾಸನ: ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಇಬ್ಬರು ನಾಯಕರು ಒಟ್ಟಿಗಿಲ್ಲ ಎಂಬುದು ನನಗೆ ಗೊತ್ತು. ಆದರೆ ಹೇಳಿಕೆ ಕೊಡುವಾಗಲಾದರೂ ಒಂದೇ ರೀತಿ ಮಾತನಾಡಲಿ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಹಾಸನದಲ್ಲಿ ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ಬೇರೆ ಪಕ್ಷಗಳಿಗೆ ಚುನಾವಣೆ ಅಂದರೆ ಚಳಿಜ್ವರ ಬಂದಂತೆ ಆಗಿದೆ. ಚುನಾವಣಾ ಫಲಿತಾಂಶ ನೋಡಿ ಯಾಕಪ್ಪ ಚುನಾವಣೆ ಬಂತು ಅಂತಿದ್ದಾರೆ. ಚುನಾವಣೆ ಪೂರ್ವದಲ್ಲಿ ಉಪಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಅಂತಾ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಪರಮೇಶ್ವರ್ ಹೇಳುತ್ತಿದ್ದರು ಎಂದರು.
ಈಗ ಸರ್ಕಾರದ ಪರವಾಗಿ ಉಪಚುನಾವಣೆ ಫಲಿತಾಂಶ ಬರುತ್ತೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಡಿಕೆ.ಶಿವಕುಮಾರ್ ಚುನಾವಣೆ ನಡೆದಿದ್ದೆ ಸರಿಯಿಲ್ಲ ಅಂತಾರೆ. ಇಬ್ಬರು ನಾಯಕರು ಒಟ್ಟಿಗಿಲ್ಲ ಎಂಬುದು ನನಗೆ ಗೊತ್ತು. ಆದರೆ ಹೇಳಿಕೆ ಕೊಡುವುದರಲ್ಲಾದರೂ ಒಟ್ಟಿಗೆ ಇರಲಿ. ಚುನಾವಣೆ ಸೋತ ನಂತರ ಮರ್ಯಾದೆಯಿಂದ ಒಪ್ಪಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಗ್ರಾಮ ಪಂಚಾಯಿತಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೋರ್ಟ್ ಚುನಾವಣೆ ಮಾಡುವಂತೆ ಆದೇಶ ನೀಡಿದೆ. ನಾವು ಚುನಾವಣೆ ಮಾಡಲು ಸಂಪೂರ್ಣ ತಯಾರಿದ್ದೇವೆ ಎಂದು ತಿಳಿಸಿದ್ದಾರೆ.